ಮಂಗಳೂರು: ಆರೋಪಿಯಾಗಿ ಪ್ರಕರಣ ದಾಖಲಾಗಿರುವ ಕಾರಣ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಹಾಗೂ ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಆರೋಪಿಯಾಗಿ ಪ್ರಕರಣ ದಾಖಲಾದ ಸಂದರ್ಭದಲ್ಲಿ ಯಾವುದೇ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಅವಕಾಶ ಮಾಡಿಕೊಡುತ್ತಾ ಬಂದಿರುವವುದು ಈ ಹಿಂದೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಈಶ್ವರಪ್ಪ ಈ ಸಂಪ್ರದಾಯವನ್ನು ಪಾಲಿಸದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಇದ್ದಾಗ ಸಚಿವ ಕೆ.ಜೆ ಜಾರ್ಜ್ ಅವರ ಮೇಲಿನ ಆರೋಪ ದಾಖಲಾದಾಗ ಅವರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೂ ವಹಿಸಿತ್ತು. ಸರ್ಕಾರದ ಕಾಮಗಾರಿಯಲ್ಲಿ ಶೇ.40 ಕಮೀಷನ್ ನೀಡಬೇಕು ಎಂದು ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿ ಗೆ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಂತೋಷ್ ಪಾಟೀಲ್ ಅನ್ನೋ ವ್ಯಕ್ತಿಗೂ ನಮಗೂ ಯಾವುದೇ ರೀತಿ ಸಂಬಂಧಗಳು ಇಲ್ಲ: ಡಾ. ವೇದಮೂರ್ತಿ
ಇದೀಗ ಬಿಜೆಪಿ ಪಕ್ಷದ ಕಾರ್ಯಕರ್ತನಿಗೆ ರಕ್ಷಣೆ ಇಲ್ಲದೆ, ನ್ಯಾಯ ದೊರೆಯದೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಿಜೆಪಿ ಆಡಳಿತದಿಂದ ಆಗಿದೆ. ಪರಮೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐಗೆ ವಹಿಸಿತ್ತು. ಆದರೆ ಬಿಜೆಪಿ ಸರ್ಕಾರ ಆ ವರದಿಯನ್ನು ಇನ್ನೂ ಬಹಿರಂಗ ಪಡಿಸಿಲ್ಲ ಎಂದು ಖಾದರ್ ಆರೋಪಿಸಿದ್ದಾರೆ. ದಾಖಲೆ ಇಲ್ಲ ಎಂದರೆ ಸರ್ಕಾರದ ಇಲಾಖೆಯ ಕಾಮಗಾರಿಯನ್ನು ಸರ್ಕಾರಿ ಸ್ಥಳದಲ್ಲಿ ಗುತ್ತಿಗೆದಾರ ಸರ್ಕಾರದ ಇಂಜಿಯರ್‌ಗಳ ಮೂಲಕ ಹೇಗೆ ಮಾಡಲು ಸಾಧ್ಯ? ಈ ಪ್ರಕರಣದಿಂದ ಬಿಜೆಪಿ ಯ ನಿಜವಾದ ಬಣ್ಣ ಬಯಲಾಗಿದೆ ಎಂದು ಖಾದರ್ ಟೀಕಿಸಿದರು.
ರಾಜೀನಾಮೆ ನೀಡದಿದ್ದರೆ ಜೈಲ್ ಬರೋ: ಅಭಯಚಂದ್ರ ಜೈನ್
ಈಶ್ವರಪ್ಪರ ಆರೋಪಿಯಾಗಿದ್ದರೂ ಸಿ.ಎಂ ಸಹಿತ ಸಚಿವ ಸಂಪುಟ ಅವರ ಬೆಂಬಲಕ್ಕೆ ನಿಂತಿರುವುದು ಸರ್ಕಾರದ ಯೋಗ್ಯತೆಯನ್ನು ತಿಳಿಸುತ್ತದೆ. ಈಶ್ವರಪ್ಪ ರಾಜಿನಾಮೆ ನೀಡದಿದ್ದರೆ ಕಾಂಗ್ರೆಸ್ ಜೈಲ್ ಬರೋ ಸೇರಿದಂತೆ ವಿವಿಧ ಪ್ರತಿಭಟನೆ ನಡೆಸಲಿದೆ. ಸಂತೋಷ್ ಪಾಟೀಲ್ ಮಾ.9ರಂದು ಈಶ್ವರಪ್ಪರ ವಿರುದ್ಧ ಭೃಷ್ಟಾಚಾರದ ಆರೋಪ ಮಾಡಿ ಆತ್ಮಹತ್ಯೆ ಮಾಡುವ ಹೇಳಿಕೆ ನೀಡಿದ್ದರೂ ಸರ್ಕಾರ ಮತ್ತು ಬಿಜೆಪಿ ಗಮನ ಹರಿಸದೆ ಆತನ ಸಾವಿನ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನನ್ನ ಸಿಡಿ ಕೇಸ್, ಸಂತೋಷ್ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ರಮೇಶ್ ಜಾರಕಿಹೊಳಿ
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ರಾದ ಸದಾಶಿವ ಉಳ್ಳಾಲ್, ನವೀನ್ ಡಿ ಸೋಜ, ಶುಭೋದಯ ಆಳ್ವ, ಸಂತೋಷ್ ಶೆಟ್ಟಿ, ಲಾರೆನ್ಸ್, ಯುವ ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.