ಲೋಕಸಭಾ ಚುನಾವಣಾ ಹೊತ್ತಲ್ಲಿ ಪವನ್ ಕಲ್ಯಾಣ್ ನಟಿಸಿರುವ ಉಸ್ತಾದ್ ಭಗತ್ ಸಿಂಗ್ (Ustad Bhagat Singh) ಸಿನಿಮಾದ ಟೀಸರ್ ರಿಲೀಸ್ (Teaser) ಆಗಿದೆ. ಪವನ್ ಕಲ್ಯಾಣ್ ಸಿನಿಮಾಗಳೆಂದರೆ, ಅಲ್ಲಿ ಬೆಂಕಿ ಬಿರುಗಾಳಿ ಎರಡೂ ಇರುತ್ತೆ. ಈ ಟೀಸರ್ ನಲ್ಲೂ ಎಲ್ಲವೂ ಇದೆ. ಜೊತೆಗೆ ಡೈಲಾಗ್ ಮೂಲಕ ಎದುರಾಳಿಗಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರಂತೆ ಪವನ್. ಹಾಗಾಗಿ ಟೀಸರ್ ಬಗ್ಗೆ ಪರ ಮತ್ತು ವಿರೋಧದ ಮಾತುಗಳು ಕೇಳಿ ಬಂದಿವೆ.
ಪವನ್ ಕಲ್ಯಾಣ್ ಲೋಕಸಭಾ ಚುನಾವಣೆಯಲ್ಲಿ ಸಕ್ರೀಯರಾಗಿದ್ದಾರೆ. ಭರ್ಜರಿ ಪ್ರಚಾರವನ್ನೂ ಆರಂಭಿಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಈ ಟೀಸರ್ ಬಳಕೆ ಆಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಚುನಾವಣಾ ಆಯೋಗಕ್ಕೂ ದೂರು ನೀಡುವ ಮಾತುಗಳಲ್ಲಿ ಅಲ್ಲಿನ ರಾಜಕಾರಣಿಗಳು ಆಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರತ್ತೋ ಕಾದು ನೋಡಬೇಕು.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಶುರುವಾದ ದಿನದಿಂದ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿದೆ ಚಿತ್ರತಂಡ. ಪವನ್ ಕಲ್ಯಾಣ್ ((Pawan Kalyan) ಮುಂದೆ ತಮಿಳು ನಟ ಪಾರ್ಥಿಬನ್ (Parthiban) ಅಬ್ಬರಿಸಲಿದ್ದಾರೆ. ಈಗಾಗಲೇ ಪಾರ್ಥಿಬನ್ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದಾರೆ.
ಜೊತೆಗೆ ಕನ್ನಡದ ಬ್ಯೂಟಿ ಶ್ರೀಲೀಲಾ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ಡ್ಯುಯೇಟ್ ಹಾಡ್ತಿದ್ದಾರೆ. ಅಲ್ಲದೇ, ಸಿನಿಮಾಗೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ.