ಮಡಿಕೇರಿ: ಮಂಜಿನ ನಗರಿಯ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 2 ಲೀಟರ್‌ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ (ಮರುಬಳಕೆ ಮಾಡದ) ಪ್ಲಾಸ್ಟಿಕ್ ಬಾಟಲಿಗಳ (Plastic Bottle) ಬಳಿಕೆಯನ್ನು ಸಂಪೂರ್ಣ ನಿಷೇಧಿಸಿ ನಗರಸಭೆ ಆದೇಶ ಹೊರಡಿಸಿದೆ.
ಹೌದು. ಮಡಿಕೇರಿ (Madikeri) ಪ್ರವಾಸಿಗರ ಪಾಲಿನ ಹಾಟ್‌ಸ್ಪಾಟ್ ಆಗಿದೆ. ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ದಾಂಗುಡಿ ಇಡುವವರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ. ಬರುವವರು ನೀರು ಕುಡಿದ ಬಳಿಕ ತಾವು ತರುವ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ನಗರದಲ್ಲಿ ಸಾವಿರಕ್ಕೂ ಅಧಿಕ ಕೆಜಿಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗುತ್ತಿದೆ. ಇದರಿಂದ ನಗರದ ಸ್ವಚ್ಛತೆಯೂ ಹಾಳಾಗುತ್ತಿದೆ. ಅಲ್ಲದೇ ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕೂ ಮಾರಕವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಮಡಿಕೇರಿ ನಗರಸಭೆ 2 ಲೀ.ಗಿಂತಲೂ ಕಡಿಮೆ ಪ್ರಮಾಣದ ತಾತ್ಕಾಲಿಕ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಪೂರ್ಣ ನಿಷೇಧಿಸಿದೆ.
ಈಗಾಗಲೇ ನಗರದ ವರ್ತಕರಿಗೆ ಪ್ರಕಟಣೆ ಮೂಲಕ ನೋಟಿಸ್ ಕೊಡಲಾಗಿದೆ. ಜೊತೆಗೆ ಪ್ರತಿ ಅಂಗಡಿ ಮುಂಗಟ್ಟುಗಳಿಗೆ ಭಿತ್ತಿಪತ್ರ ಅಂಟಿಸಿ, ಪ್ಲಾಸ್ಟಿಕ್ ಬಾಟಲಿಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಖರೀದಿ ಮಾಡಿರುವ ಬಾಟಲಿಗಳ ಮಾರಾಟಕ್ಕೆ ಅವಕಾಶವಿದ್ದು, ಹೊಸದಾಗಿ ತರಿಸದಂತೆ ನಗರಸಭೆ ಸೂಚನೆ ಕೊಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ 50 ಕೋಟಿಗೂ ಅಧಿಕ ಮೌಲ್ಯದ ವಿವಾದಿತ ಜಾಗ ಕಬ್ಜಾ: ಬಿಜೆಪಿ ಆರೋಪ
ಅಲ್ಲದೇ ನಗರಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ತರದಂತೆ ಅಲ್ಲಲ್ಲಿ ಸೂಚನಾ ಫಲಕ ಅಳವಡಿಸಲಾಗಿದೆ. ಮುಂದಿನ ಎರಡು ತಿಂಗಳವರೆಗೆ ಅರಿವು ಮೂಡಿಸಿ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ ನಗರಸಭೆಯ ನಿರ್ಧಾರವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೊಡಗು ಜಿಲ್ಲೆ ಪ್ರವಾಸಿಗರಿಂದ ಕಸದ ತೊಟ್ಟಿಯಾಗುವುದು ಬೇಡ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾಲಗಾರರ ಕಿರುಕುಳಕ್ಕೆ ಎದೆಗುಂದಿ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ: ಉ.ಕನ್ನಡ ಎಸ್‌ಪಿ ಸಲಹೆ