-ಪಿಂಕ್ ಪೌಡರ್‌ನಿಂದ ಪರಿಸರದ ಮೇಲಾಗುವ ಪರಿಣಾಮವೇನು?
-ಬೆಂಕಿ ನಂದಿಸುವಲ್ಲಿ ಸೂಪರ್ ಸ್ಕೂಪರ್ಸ್ ವಿಮಾನ ಹೇಗೆ ಸಹಕಾರಿ?
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಹೊತ್ತಿಕೊಂಡ ಕಾಡ್ಗಿಚ್ಚು ತನ್ನ ಅಗ್ನಿ ನರ್ತನ ಮುಂದುವರಿಸಿದೆ. ಸದ್ಯ ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಎಕರೆ ಭೂಪ್ರದೇಶ ಬೆಂಕಿಜ್ವಾಲೆಗೆ ಭಸ್ಮವಾಗಿದ್ದು, ಆರ್ಥಿಕ ನಷ್ಟವುಂಟುಮಾಡಿದೆ. ಈ ಬೆನ್ನಲ್ಲೇ ಬೆಂಕಿಯನ್ನು ಹತೋಟಿಗೆ ತರಲು ಲಾಸ್ ಏಂಜಲೀಸ್‌ನಲ್ಲಿ ಗುಲಾಬಿ ಬಣ್ಣದ ಪೌಡರ್‌ವೊಂದನ್ನು ಆಕಾಶದಿಂದ ಹೆಲಿಕಾಪ್ಟರ್ ಮೂಲಕ ಸುರಿಸಲಾಗಿದೆ. ಅಲ್ಲದೇ ಬೆಂಕಿ ನಂದಿಸಲು ಕೆನಡಾದ ಸೂಪರ್ ಸ್ಕೂಪರ್ಸ್ ಎಂಬ ವಿಶೇಷ ವಿಮಾನವನ್ನು ಬಳಸಲಾಗಿದೆ. ಹಾಗಿದ್ರೆ ಬೆಂಕಿ ನಂದಿಸುವಲ್ಲಿ ಪಿಂಕ್ ಪೌಡರ್ ಹಾಗೂ ಸೂಪರ್ ಸ್ಕೂಪರ್ಸ್ ವಿಮಾನದ ಪಾತ್ರ ಏನು? ಇವುಗಳ ವಿಶೇಷತೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
Advertisement
ಏನಿದು ಪಿಂಕ್ ಪೌಡರ್?
ಗುಲಾಬಿ ಬಣ್ಣದ ಈ ಪೌಡರ್ ಹೆಸರು ಫೋಸ್ ಚೆಕ್. ಇದು ಅಗ್ನಿ ನಿರೋಧಕವಾಗಿ ಕೆಲಸ ಮಾಡುತ್ತದೆ. ನೀರು, ಲವಣಗಳು ಮತ್ತು ತುಕ್ಕು ನಿರೋಧಕಗಳ ಮಿಶ್ರಣವಾದ ಫೋಸ್ ಚೆಕ್ ಬೆಂಕಿಯನ್ನು ತಣ್ಣಗಾಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಬೆಂಕಿ ಜ್ವಾಲೆಗಳನ್ನು ಕಡಿಮೆ ಮಾಡುತ್ತದೆ. ಆದರೆ ಈ ಪೌಡರ್ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.
Advertisement
ಫೋಸ್ ಚೆಕ್ ಪೌಡರ್ ಅನ್ನು ಪೆರಿಮೀಟರ್ ಎಂಬ ಕಂಪನಿ ಮಾರಾಟ ಮಾಡುತ್ತದೆ. 1963ರಿಂದ ಅಮೆರಿಕದಲ್ಲಿ ಬೆಂಕಿಯನ್ನು ನಂದಿಸಲು ಈ ಪೌಡರ್ ಅನ್ನು ಬಳಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಬೆಂಕಿ ನಿವಾರಕ ಎಂದು ಅಸೋಸಿಯೇಟೆಡ್ ಪ್ರೆಸ್ 2022ರಲ್ಲಿ ವರದಿ ಮಾಡಿತ್ತು. ಪೈಲಟ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಕಾಣಿಸುವ ಸಲುವಾಗಿ ಫೋಸ್ ಚೆಕ್‌ಗೆ ಬಣ್ಣ ಸೇರಿಸಲಾಗಿದೆ. ಈ ಪುಡಿಯನ್ನು ಬಳಸಿದ ಬಳಿಕ ಸ್ವಚ್ಛಗೊಳಿಸಬೇಕು.
Advertisement
ಫೋಸ್ ಚೆಕ್ 80% ನೀರು, 14% ರಸಗೊಬ್ಬರ ಮಾದರಿಯ ಲವಣಗಳು ಮತ್ತು 6% ತುಕ್ಕು ನಿರೋಧಕಗಳು ಮತ್ತು ಬಣ್ಣಗಳನ್ನು ಒಳಗೊಂಡಿದೆ. ಅಲ್ಲದೇ ಅಮೋನಿಯಂ ಪಾಲಿಫಾಸ್ಪೇಟ್‌ನಂತಹ ಲವಣಗಳನ್ನು ಹೊಂದಿದೆ. ಕಾಡ್ಗಿಚ್ಚು ಹಬ್ಬಿರುವ, ಹಬ್ಬುತ್ತಿರುವ ಪ್ರದೇಶದ ಸುತ್ತಲೂ ಇದನ್ನು ಸಿಂಪಡಿಸಲಾಗುತ್ತದೆ. ಇದು ನೀರಿಗಿಂತ ಹೆಚ್ಚು ಕಾಲ ತೇವವಾಗಿರುತ್ತದೆ.
Advertisement
ಪರಿಸರಕ್ಕೆ ಹಾನಿ:
ಕಾಡ್ಗಿಚ್ಚು ನಂದಿಸಲು ಬಳಸುವ ಈ ಪೌಡರ್ ಪರಿಸರಕ್ಕೆ ಅಪಾಯಕಾರಿ ಎಂದು ಸಂಶೋಧನೆಗಳು ಕಂಡುಕೊಂಡಿವೆ. ಈ ರಾಸಾಯನಿಕ ವನ್ಯಜೀವಿಗಳು, ಜಲಜೀವಿ ಹಾಗೂ ಮಾನವರಿಗೆ ಹಾನಿಕಾರಕ. ಈ ಪೌಡರ್ ಬಳಕೆಯಿಂದ ನದಿ, ನೀರಿನ ಮೂಲಗಳು ಕಲುಷಿತಗೊಳ್ಳಬಹುದು. ಈ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅಳಿವಿನಂಚಿನಲ್ಲಿರುವ ಪ್ರಭೇದಗಳ ಆವಾಸಸ್ಥಾನಗಳ ಪ್ರದೇಶದಲ್ಲಿ ಈ ಪೌಡರ್ ಬಳಕೆ ನಿಷೇಧಿಸಲಾಗಿದೆ.
ಬೆಂಕಿ ಆರಿದ ತಕ್ಷಣ ಅದನ್ನು ಸ್ವಚ್ಛಗೊಳಿಸಬೇಕು. ಈ ಪುಡಿ ಹೆಚ್ಚು ಒಣಗಿದರೆ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಹೆಚ್ಚು ಕಷ್ಟ ಎಂದು ಪೆರಿಮೀಟರ್ ಸೂಚನೆ ನೀಡಿದೆ. ಸಣ್ಣ ಜಾಗ ಅಥವಾ ಪ್ರದೇಶಗಳಲ್ಲಿ ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಪುಡಿಯನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇನ್ನೂ ದೊಡ್ಡ ಪ್ರದೇಶಗಳಲ್ಲಿ ಈ ಪೌಡರ್ ಅನ್ನು ಸ್ವಚ್ಛಗೊಳಿಸಲು ಪ್ರೆಶರ್ ವಾಷರ್ ಯಂತ್ರಗಳನ್ನು ಬಳಸಬೇಕು ಎಂದು ಪೆರಿಮೀಟರ್ ಕಂಪನಿ ತಿಳಿಸಿದೆ.
ಲಾಸ್ ಏಂಜಲೀಸ್‌ನ ಪ್ರಮುಖ ಬೆಳವಣಿಗೆಗಳು:
*ಕ್ಯಾಲಿಫೋರ್ನಿಯಾದ ಪಾಲಿಸೇಡ್ಸ್ ಪ್ರದೇಶವೊಂದರಲ್ಲೇ ಸುಟ್ಟು ಭಸ್ಮವಾದ ಭೂಪ್ರದೇಶದ ಪ್ರಮಾಣ 23,600 ಎಕ್ರೆಗೆ ಏರಿಕೆಯಾಗಿದೆ.
*12,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿದೆ. ಸಾವಿನ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಶ್ವಾನದಳದ ಮೂಲಕ ಶವಗಳ ಹುಟುಕಾಟ ಕಾರ್ಯನಡೆದಿದೆ. ಜ.7ರಂದು ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಈವರೆಗೆ ಅಂದಾಜು 150 ಶತಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಉಂಟಾಗಿದೆ.
*ಬಿಸಿ ಗಾಳಿ, ಫೈರ್ನಾಡೋ (ಅಗ್ನಿ ಜ್ವಾಲೆ)ಗಳು ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದು, ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಅಮೆರಿಕದ ಇತಿಹಾಸದಲ್ಲೇ ಇದು ಕಂಡೂ ಕೇಳರಿಯದ ಕಾಡ್ಗಿಚ್ಚು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.
*ಈಗಾಗಲೇ 1.53 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಅಲ್ಲದೇ ಇನ್ನೂ 57,000 ಕಟ್ಟಡಗಳು ಅಪಾಯದಲ್ಲಿವೆ. 1.66 ಲಕ್ಷ ಮಂದಿ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ.
*ಈ ಮಧ್ಯೆ ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ನಂದಿಸಲು ನೆರವು ಚಾಚಿವೆ.
ಬೆಂಕಿ ನಂದಿಸಲು ಸೂಪರ್ ಸ್ಕೂಪರ್ಸ್ ವಿಮಾನಗಳು:
ಇನ್ನು ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್‌ಗಳು, ವಿಮಾನಗಳು ಹಾಗೂ ಅಗ್ನಿಶಾಮಕ ವಾಹನಗಳನ್ನು ಬಳಸಲಾಗುತ್ತದೆ. ಅಲ್ಲದೇ ಬೆಂಕಿ ನಂದಿಸುವ ಸಲುವಾಗಿ ಕೆನಡಾದ ಸೂಪರ್ ಸ್ಕೂಪರ್ಸ್ ಎಂಬ ಕೆನಡಾದ ಸೂಪರ್ ವಿಮಾನಗಳು ಎಂಟ್ರ ಕೊಟ್ಟಿವೆ. ಕಾಡ್ಗಿಚ್ಚನ್ನು ನಂದಿಸಲು ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಈ ಸಿಎಲ್ 455 ವಿಮಾನವು ಅನೇಕ ಸುಧಾರಿತ ತಂತ್ರಜ್ಞಾನ, ವಿಶೇಷಗಳನ್ನು ಹೊಂದಿದೆ.
ಈ ವಿಮಾನವೂ ಎಲ್ಲೂ ಲ್ಯಾಂಡ್ ಆಗದೇ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಅಗತ್ಯವಿದ್ದರೆ ಫೋಮ್ ಜೊತೆ ನೀರನ್ನು ಬೆರೆಸಿ ಸಿಂಪಡಣೆ ಮಾಡುತ್ತದೆ. 16,000 ಗ್ಯಾಲನ್ ನೀರನ್ನು (ಸುಮಾರು 60,000 ಲೀಟರ್) 350 ಕಿ.ಮೀ ವೇಗದಲ್ಲಿ ತಂದು ಉರಿಯುವ ಬೆಂಕಿಗೆ ಸುರಿಯುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಅಲ್ಲದೇ ಎಲ್ಲಿಯೂ ಲ್ಯಾಂಡ್ ಆಗದೇ ನೀರು ತುಂಬಿಸಿಕೊಂಡು ಮತ್ತೆ ತ್ವರಿತವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ಇದು ತೊಡಗುತ್ತದೆ.
ಹೆಲಿಕಾಪ್ಟರ್‌ಗಳ ಬಕೆಟ್‌ಗಳಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚು ನೀರು ತುಂಬುತ್ತದೆ. ಏರ್ ಟ್ಯಾಂಕರ್‌ಗಳಿಗಿಂತ ಸೂಪರ್ ಸ್ಕೂಪರ್‌ಗಳು ಹೆಚ್ಚು ಪರಿಣಾಮಕಾರಿಯಾಗಿದೆ. ಏರ್ ಟ್ಯಾಂಕರ್‌ಗಳು ನೀರು ತುಂಬಿಸಿಕೊಳ್ಳಲು ನೆಲಕ್ಕೆ ಇಳಿಯಬೇಕು. ಆದರೆ ಸ್ಕೂಪರ್‌ಗಳು ನೆಲಕ್ಕೆ ಇಳಿಯದೇ ನದಿಗಳ ಮೇಲೆ ಅಡಿಭಾಗವನ್ನು ತಾಗಿಸುತ್ತಾ 180 ಕಿ.ಮೀ ವೇಗದಲ್ಲಿ ಸಾಗುತ್ತದೆ. ಈ ವೇಳೆ ಇದರ ಟ್ಯಾಂಕ್‌ನಲ್ಲಿ ನೀರು ತುಂಬುತ್ತದೆ.
ಈ ವಿಮಾನಗಳು 93 ಅಡಿ ಅಗಲದ ರೆಕ್ಕೆಗಳನ್ನು ಹೊಂದಿದ್ದು, 65 ಅಡಿ ಉದ್ದವಿದೆ.ನೀರಿನ ಮೇಲ್ಮೈಯಲ್ಲಿ ಚಲಿಸುವ ಮೂಲಕ ಕೇವಲ 12 ಸೆಕೆಂಡುಗಳಲ್ಲಿ ಟ್ಯಾಂಕ್‌ನಲ್ಲಿ ನೀರು ತುಂಬುತ್ತದೆ. ಪೈಪ್ ಮೂಲಕವೂ ನೀರು ತುಂಬಿಸಬಹುದು. ಒಮ್ಮೆ ನೀರು ತುಂಬಿದ ಬಳಿಕ 350 ಕಿ.ಮೀ ವೇಗದಲ್ಲಿ ಬೆಂಕಿ ಆವರಿಸಿದ ಪ್ರದೇಶಕ್ಕೆ ಈ ವಿಮಾನ ಹಾರುತ್ತದೆ. ಈ ವಿಮಾನದಲ್ಲಿ ಬೆಂಕಿಯ ಮೇಲೆ ಒಮ್ಮೆಗೆ ನೀರನ್ನು ಸುರಿಸಬಹುದು. ಅಲ್ಲದೇ ನಾಲ್ಕು ಬಾಗಿಲುಗಳ ಮೂಲಕವೂ ವಿಶಾಲ ಪ್ರದೇಶದ ಮೇಲೆ ನೀರನ್ನು ಸಿಂಪಡಿಸಬಹುದು ಎಂದು ವಾಷಿಂಗ್ಟನ್ ವರದಿ ತಿಳಿಸಿದೆ.