ಮುಂಬೈ: ಏಕಾದಶಿಯಂದು ಅಮೆರಿಕದ ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಉಡಾಯನ ಮಾಡಿದ್ದರಿಂದ ಅದು ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಿತು ಎಂದು ಮಹಾರಾಷ್ಟ್ರದ ಹಿಂದೂ ಸಂಘಟನೆಯೊಂದರ ನಾಯಕ ಸಂಭಾಜಿ ಭಿಡೆ ಹೇಳಿದ್ದಾರೆ.
ಈ ಹಿಂದೆ ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದ ಅವರು ಇಸ್ರೋ ಚಂದ್ರಯಾನ ಚಂದ್ರನ ದಕ್ಷಿಣ ಧ್ರುವ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಸೊಲ್ಲಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಅಮೆರಿಕ ಸತತ 38 ಪ್ರಯತ್ನ ಮಾಡಿದರೂ ಅದು ವಿಫಲವಾಗಿತ್ತು. ಕೊನೆಗೆ ಏಕಾದಶಿಯಂದು ರಾಕೆಟ್ ಉಡಾವಣೆಯ ದಿನಾಂಕ ನಿಗದಿ ಮಾಡಿತು. ಹೀಗಾಗಿ 39ನೇ ಪ್ರಯತ್ನದಲ್ಲಿ ಅಮೆರಿಕದ ನೌಕೆ ಚಂದ್ರನ ಅಂಗಳ ತಲುಪಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಪ್ರಯತ್ನಗಳು ವಿಫಲವಾಗುತ್ತಿದ್ದಂತೆ ಅಮೆರಿಕದ ವಿಜ್ಞಾನಿಯೊಬ್ಬರು ಭಾರತೀಯರು ಬಳಸುವ ‘ಸಮಯ ನಿಗದಿ’ ವ್ಯವಸ್ಥೆಯನ್ನು ಅಳವಡಿಸುವಂತೆ ಸಲಹೆ ನೀಡಿದರು. ಅಚ್ಚರಿ ಎಂಬಂತೆ ಏಕಾದಶಿ ದಿನದಂದೆ ಉಡಾವಣೆಯಾಗಿದ್ದ ನೌಕೆ ಯಶಸ್ವಿಯಾಗಿ ಚಂದ್ರನಲ್ಲಿ ಲ್ಯಾಂಡ್ ಆಯಿತು ಎಂದು ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ.
Advertisement
ಭಿಡೆ ಅವರು ಈ ಹಿಂದೆ ತಮ್ಮ ವಿಭಿನ್ನ ಹೇಳಿಕೆಯಿಂದಲೇ ಸುದ್ದಿಯಾಗಿದ್ದರು. ನನ್ನ ಮನೆಯ ತೋಟದಲ್ಲಿರುವ ಮಾವಿನಹಣ್ಣನ್ನು ಸೇವಿಸಿ ತಾಯಂದಿರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.
Advertisement
ಏಕಾದಶಿಗೂ ಚಂದ್ರನಿಗೂ ಏನು ಸಂಬಂಧ?
ಹಿಂದೂ ಪಂಚಾಂಗದ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎಂದು ಕರೆಯಲಾಗುತ್ತದೆ. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಖಗೋಳ ಶಾಸ್ತ್ರದ ಪ್ರಕಾರ ಚಂದ್ರನು ಭೂಮಿಯ ಸುತ್ತ ಸುತ್ತುವಾಗ 24 ಗಂಟೆಗಳ ಅವಧಿಯ ಅಂತರದಲ್ಲಿ 12 ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ದಿನದಿಂದ ದಶಮಿಯಂದು 120 ಡಿಗ್ರಿಗಳಷ್ಟು ಚಂದ್ರ ಸಂಚರಿಸಿರುತ್ತಾನೆ. ಏಕಾದಶಿಯಂದು ಚಂದ್ರನು 132 ಡಿಗ್ರಿ ಕೋನದಲ್ಲಿರುತ್ತಾನೆ. ಈ ದಿನ ಚಂದ್ರನ ಆಕರ್ಷಣೆ ಹೆಚ್ಚಿರುತ್ತದೆ. ಮಾನವನ ಶರೀರದ ಮೇಲೂ ಪರಿಣಾಮ ಉಂಟಾಗುತ್ತದೆ. ಮಾನವನ ಜೀರ್ಣಾಂಗ ವ್ಯವಸ್ಥೆಯ ಮೇಲೂ ಇದು ಪ್ರಭಾವ ಬೀರುವುದರಿಂದ ಏಕಾದಶಿಯಂದು ಉಪವಾಸ ಮಾಡಿದರೆ ಮಾನವನ ಆರೋಗ್ಯ ಸಮೃದ್ಧಿಯಾಗಿರುತ್ತದೆ ಎನ್ನುವ ನಂಬಿಕೆಯಿದೆ.