ತನ್ನನ್ನು ಮೋದಿ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ US ಗುಪ್ತಚರ ವಿಭಾಗದ ಬಾಸ್‌ ಕೆಂಡಾಮಂಡಲ

Public TV
4 Min Read
Tulsi Gabbard

– ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ತುಳಸಿ ಗಬ್ಬಾರ್ಡ್ ನೇಮಕ
– ಸೆನೆಟ್ ಆಯ್ಕೆ ಸಮಿತಿಯ ಮುಂದೆ 3 ಗಂಟೆ ವಿಚಾರಣೆ
– ಇಸ್ಲಾಂ ಉಗ್ರರಿಗೆ ಒಬಾಮಾ ಸರ್ಕಾರದಿಂದ ಹಣಕಾಸಿನ ನೆರವು

ವಾಷಿಂಗ್ಟನ್‌: ಅಮೆರಿಕದ ರಾಷ್ಟ್ರೀಯ ಗುಪ್ತಚರ (National Intelligence) ವಿಭಾಗದ ನಿರ್ದೇಶಕಿ ತುಳಸಿ ಗಬ್ಬಾರ್ಡ್ (Tulsi Gabbard) ಅವರು ತಾನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಕೈಗೊಂಬೆ ಎಂದ ಡೆಮಾಕ್ರಟಿಕ್‌ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿಯಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ಹುದ್ದೆಯನ್ನು ದೃಢೀಕರಣಗೊಳಿಸಲು ಗುಪ್ತಚರ ಕುರಿತ ಸೆನೆಟ್ ಆಯ್ಕೆ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದರು.

ಡೆಮಾಕ್ರಟಿಕ್‌ಗಳು ನನ್ನನ್ನು ಟ್ರಂಪ್ ಕೈಗೊಂಬೆ, ಪುಟಿನ್ ಅವರ ಕೈಗೊಂಬೆ, ಅಸ್ಸಾದ್ ಕೈಗೊಂಬೆ, ಮೋದಿ ಅವರ ಕೈಗೊಂಬೆ ಎಂದು ಆರೋಪಿಸಿದ್ದಾರೆ. ಆದರೆ ನಿಜವಾಗಿಯೂ ಅವರನ್ನು ಕೆರಳಿಸುವ ವಿಷಯ ಯಾವುದು ಅಂದರೆ ನಾನು ಡೆಮಕ್ರಾಟಿಕ್‌ ಕೈಗೊಂಬೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ದುರದೃಷ್ಟ ಏನೆಂದರೆ ಡೆಮಾಕ್ರಟಿಕ್‌ಗಳು ನನ್ನ ವಿರುದ್ಧ ಮತ್ತೆ ಧಾರ್ಮಿಕ ಮತಾಂಧತೆಯ ಕಾರ್ಡ್ ಬಳಸುತ್ತಿದ್ದಾರೆ. ಆದರೆ ಈ ಬಾರಿ ಹಿಂದೂಗಳು (Hindu) ಮತ್ತು ಹಿಂದೂ ಧರ್ಮದ ವಿರುದ್ಧ ಧಾರ್ಮಿಕ ಮತಾಂಧತೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ನನ್ನ ವೈಯಕ್ತಿಕ ಆಧ್ಯಾತ್ಮಿಕ ಹಿಂದೂ ಧರ್ಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿದ್ದರೆ ಎಕ್ಸ್‌ನಲ್ಲಿ ನನ್ನ ಖಾತೆಗೆ ಹೋಗಿ ನೋಡಬಹುದು. ಅಲ್ಲಿ ನಾನು ಈ ವಿಷಯದ ಬಗ್ಗೆ ಹೆಚ್ಚಿನದನ್ನು ಹಂಚಿಕೊಳ್ಳುತ್ತೇನೆ ಎಂದು ತುಳಸಿ ಗಬ್ಬಾರ್ಡ್ ತಿಳಿಸಿದರು.

ಸೆನೆಟ್ ಗುಪ್ತಚರ ಸಮಿತಿ ಗಬ್ಬಾರ್ಡ್ ಅವರನ್ನು ಮೂರು ಗಂಟೆಗಳ ವಿಚಾರಣೆ ನಡೆಸಿತು. ಈ ವೇಳೆ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ತಮ್ಮ ನಿಲುವನ್ನು ತಿಳಿಸಿದರು. ಸಿರಿಯನ್ ನಾಯಕ ಬಷರ್ ಅಲ್-ಅಸ್ಸಾದ್ ಬಗ್ಗೆ ನನಗೆ ಯಾವುದೇ ಒಲವು ಇಲ್ಲ. 2017 ರ ಲೆಬನಾನ್ ಪ್ರವಾಸದ ಸಮಯದಲ್ಲಿ ಹಿಜ್ಬೊಲ್ಲಾ ಪ್ರತಿನಿಧಿಗಳ ಜೊತೆಗಿನ ಭೇಟಿಯನ್ನು ನಿರಾಕರಿಸಿದ್ದೆ ಎಂದರು.

ಅಸ್ಸಾದ್ ಅಥವಾ ಗಡಾಫಿ ಅಥವಾ ಯಾವುದೇ ಸರ್ವಾಧಿಕಾರಿಯ ಬಗ್ಗೆ ನನಗೆ ಯಾವುದೇ ಪ್ರೀತಿ ಇಲ್ಲ. ನಾನು ಅಲ್-ಖೈದಾವನ್ನು ದ್ವೇಷಿಸುತ್ತೇನೆ. ಇಸ್ಲಾಮಿಸ್ಟ್ ಉಗ್ರರ ಜೊತೆ ಸ್ನೇಹಪರರಾಗಿರುವ ಎಲ್ಲಾ ನಾಯಕರನ್ನೂ ನಾನು ದ್ವೇಷಿಸುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ: ವಿಮಾನ ದುರಂತಕ್ಕೆ ಒಬಾಮಾ, ಬೈಡನ್‌ ಜಾರಿಗೆ ತಂದ ನೇಮಕಾತಿ ನೀತಿಯೇ ಕಾರಣ: ಟ್ರಂಪ್‌ ವಾಗ್ದಾಳಿ

ಮಧ್ಯಪ್ರಾಚ್ಯದಲ್ಲಿ ಆಡಳಿತ ಬದಲಾವಣೆ ಸ್ಥಾಪಿಸುವ ಸಲುವಾಗಿ ಒಬಾಮಾ ಅವರು ಸ್ಲಾಮಿಸ್ಟ್ ಉಗ್ರಗಾಮಿ ಗುಂಪುಗಳನ್ನು ರಚಿಸಿ ಹಣಕಾಸಿನ ನೆರವು ನೀಡಿದ್ದರು ಎಂದು ತುಳಸಿ ಗಬ್ಬಾರ್ಡ್ ಈ ವೇಳೆ ಬಹಿರಂಗಪಡಿಸಿದರು.

ತುಳಸಿ ಗಬ್ಬಾರ್ಡ್ ಅಮೆರಿಕದ ಮೊದಲ ಹಿಂದೂ ಸಂಸದೆಯಾಗಿದ್ದು ಈ ಮೊದಲು ಡೆಮಾಕ್ರಟಿಕ್ ಪಕ್ಷದಲ್ಲಿದ್ದರು. 2022 ರಲ್ಲಿ ರಿಪಬ್ಲಿಕನ್‌ ಪಕ್ಷ ಸೇರಿದ ಇವರು ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧ್ಯಕ್ಷ ಸ್ಪರ್ಧೆಗೆ ಅನುಮೋದಿಸಿದ್ದರು.

Tulsi Gabbard 4

 

ಯಾರು ತುಳಸಿ ಗಬ್ಬಾರ್ಡ್‌?
ಸುಮಾರು 20 ವರ್ಷದಗಳ ಸೈನ್ಯದ ಶಾಖೆಯಾದ ನ್ಯಾಷನಲ್ ಗಾರ್ಡ್‌ನಲ್ಲಿ ಸೇವೆ ಸಲ್ಲಿಸಿರುವ ಇವರಿಗೆ ಭಾರತದ ಜೊತೆ ನೇರವಾದ ಸಂಬಂಧ ಇಲ್ಲ. ಆದರೆ ಇವರ ತಾಯಿ ಹಿಂದೂ (Hindu) ಧರ್ಮವನ್ನು ಪಾಲಿಸುತ್ತಿದ್ದ ಹಿನ್ನೆಲೆಯಲ್ಲಿ ಪುತ್ರಿಗೆ ತುಳಸಿ ಎಂದು ಹೆಸರನ್ನು ಇರಿಸಿದ್ದರು.

Tulsi Gabbard 3

ಬಾಲ್ಯದಲ್ಲಿ ಯೋಗ ಅಭ್ಯಾಸ ಮಾಡುತ್ತಿದ್ದ ಇವರು ಭಗವದ್ಗೀತೆಯಿಂದ ಆಧ್ಯಾತ್ಮಿಕ ವಿಷಯಗಳನ್ನು ಕಲಿತ್ತಿದ್ದಾರೆ. ವೈಷ್ಣವ ಹಿಂದೂ ಸಂಘಟನೆಯಾದ ಸೈನ್ಸ್ ಆಫ್ ಐಡೆಂಟಿಟಿ ಫೌಂಡೇಶನ್ ಮತ್ತು ಇಸ್ಕಾನ್‌ ಸಂಸ್ಥೆಯ ಪ್ರಭಾವದಿಂದಾಗಿ ತುಳಸಿ ಅವರು ಹಿಂದೂ ಜೀವನ ಪದ್ದತಿಯಂತೆ ಜೀವಿಸುತ್ತಿದ್ದಾರೆ.

2015ರಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಅಬ್ರಹಾಂ ವಿಲಿಯಮ್ಸ್ ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಪತಿಯೂ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಭಗವತ್ ಗೀತೆಯ ಮೇಲೆ ಕೈಯಿಟ್ಟು ತುಳಸಿ ಪ್ರಮಾಣ ವಚನ ಸ್ವೀಕರಿಸಿದ್ದರು.

Tulsi Gabbard and Narendra Modi

2014ರ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ತುಳಸಿ ಗಬ್ಬಾರ್ಡ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಭಗವದ್ಗೀತೆ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು. ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಧಾನಿಯವರ ಪ್ರಸ್ತಾವನೆಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು.

ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಸೆಪ್ಟೆಂಬರ್ 11 , 2001 ರಂದು ದಾಳಿ ನಡೆದ ಬಳಿಕ ಅಮೆರಿಕದ ಗುಪ್ತಚರ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಮತ್ತು ವೈಫಲ್ಯಗಳನ್ನು ತಡೆಯಲು ಸಹಾಯ ಮಾಡಲು ರಾಷ್ಟ್ರೀಯ ಗುಪ್ತಚರ ವಿಭಾಗವನ್ನು 2004 ರಲ್ಲಿ ರಚಿಸಲಾಯಿತು. ವಿದೇಶಿ ಚುನಾವಣಾ ಹಸ್ತಕ್ಷೇಪ, ಸೈಬರ್ ಸಮಸ್ಯೆಗಳು, ಭಯೋತ್ಪಾದನೆ ಮತ್ತು ಬೇಹುಗಾರಿಕೆಯಂತಹ ಬೆದರಿಕೆಗಳ ಮೇಲೆ ಕೇಂದ್ರೀಕರಿಸಿ ಕೆಲಸ ಮಾಡುತ್ತದೆ.

Share This Article