ವಾಷಿಂಗ್ಟನ್: ಪತಿ ಹಾಗೂ ಕೆಲಸವನ್ನು ತೊರೆದ ಬಳಿ ಅಮೆರಿಕದ ಮಹಿಳೆಯೊಬ್ಬರು ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತಾವು ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
2020ರ ವರೆಗೂ ರೋಡ್ ಐಲೆಂಡ್‌ನ ಕೋನಿ ಸ್ಟೋವರ್ಸ್ ಅವರು ಪತಿ ಹಾಗೂ ಮಗಳೊಂದಿಗೆ ಪರಿಪೂರ್ಣ ಜೀವನ ನಡೆಸುತ್ತಿದ್ದರು. ಕೈತುಂಬಾ ಸಂಬಳ ಪಡೆಯುವ ಕೆಲಸದಲ್ಲೂ ಇದ್ದರು. ಸುಂದರವಾದ ಮನೆ ಕೂಡ ಇತ್ತು.
ಕಾಲಾನಂತರದಲ್ಲಿ ಸಂಸಾರ ಮತ್ತು ಕೆಲಸದ ಬಗ್ಗೆ ಅತೃಪ್ತಿ ಹೊಂದಲು ಶುರುಮಾಡಿದರು. ಮಾನಸಿಕ ನೆಮ್ಮದಿಗಾಗಿ ಮದ್ಯದ ಚಟಕ್ಕೆ ಬಿದ್ದರು. ಆರೋಗ್ಯಕರವಲ್ಲದ ಆಹಾರ ಪದ್ಧತಿ ರೂಢಿಸಿಕೊಂಡರು. ಇದು ಅವರ ದೇಹದ ತೂಕ ಹೆಚ್ಚಲು ಕಾರಣವಾಯಿತು. ಬದಲಾದ ಜೀವನಶೈಲಿಯಿಂದ ಅವರ ತೂಕ ಬರೋಬ್ಬರಿ 136 ಕೆಜಿಗೆ ಹೆಚ್ಚಿತು.
2021 ರಲ್ಲಿ ಸ್ಟೋವರ್ಸ್ ತನ್ನ ಪತಿಯಿಂದ ದೂರವಾದರು. ಕೆಲಸಕ್ಕೂ ವಿದಾಯ ಹೇಳಿದರು. ಸ್ವಂತ ವ್ಯವಹಾರ ಆರಂಭಿಸಿದರು. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್ ಮೊರೆ ಹೋದರು.
ನಾಲ್ಕು ವರ್ಷಗಳ ಹಿಂದೆ, ನನ್ನ ಜೀವನ ಹೊರಗಿನಿಂದ ಚೆನ್ನಾಗಿ ಕಾಣುತ್ತಿತ್ತು. ನನಗೆ ಉತ್ತಮ ಸಂಬಳದ ಕೆಲಸ, ಮದುವೆ, ಸುಂದರ ಮಗಳು, ಮನೆ. ನಾನು ಬಯಸಬೇಕಾದ ಎಲ್ಲವೂ ಇತ್ತು. ಆದರೆ ನಾನು ಜಂಜಾಟಕ್ಕೆ ಸಿಲುಕಿದಂತೆ ಭಾಸವಾಯಿತು. ಕೊನೆಗೆ ನಾನು ಬದಲಾವಣೆಗೆ ತೆರೆದುಕೊಂಡೆ. ಪತಿಯನ್ನು ತೊರೆಯುವುದು ಕಷ್ಟದ ಕೆಲಸವಾಗಿತ್ತು. ಆದರೂ, ಜೀವನದಲ್ಲಿ ಬದಲಾವಣೆ ಬೇಕು ಎಂದು ದೃಢ ನಿರ್ಧಾರ ಕೈಗೊಂಡೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡೆ. ದೇಹದ ತೂಕ ಇಳಿಸಿಕೊಳ್ಳಲು ರೋಲರ್-ಸ್ಕೇಟಿಂಗ್ ಆಯ್ಕೆ ಮಾಡಿಕೊಂಡೆ ಎಂದು ಸ್ಟೋವರ್ಸ್ ತಿಳಿಸಿದ್ದಾರೆ.