ಪಲ್ಟಿ ಹೊಡೆದು ಮರದಲ್ಲಿ ಸಿಲುಕಿಕೊಂಡ ಕಾರು – 6 ದಿನ ಸಾವು ಬದುಕಿನ ಮಧ್ಯೆ ಕಾಲ ಕಳೆದ ಮಹಿಳೆ

Public TV
1 Min Read
US Woman 1

ವಾಷಿಂಗ್ಟನ್: ರಸ್ತೆ ಅಪಘಾತಕ್ಕೆ ತುತ್ತಾಗಿ ಸಿನಿಮಿಯ ರೀತಿಯಲ್ಲಿ 53 ವರ್ಷದ ಮಹಿಳೆಯೊಬ್ಬಳು ಸಾವು-ಬದುಕಿನ ಮಧ್ಯೆ ಹೋರಾಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಹೌದು. ಅರಿಜೋನದ ಮರಳುಗಾಡು ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ಟೋಬರ್ 12ರಂದು ಮಹಿಳೆಯೊಬ್ಬಳು ವೇಗವಾಗಿ ಕಾರು ಚಾಲನೆ ಮಾಡಿದ್ದಳು. ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು ಪ್ರಪಾತ ಮಧ್ಯೆ 17 ಮೀಟರ್ ಎತ್ತರವಿರುವ ಮರದಲ್ಲಿ ಸಿಲುಕಿಕೊಂಡಿತ್ತು. ಚಾಲನೆ ಮಾಡುತ್ತಿದ್ದ ಮಹಿಳೆಯೂ ಕಾರಿನಲ್ಲಿ ಸಿಲುಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಳು. ಪ್ರಪಾತದಲ್ಲಿ ಕಾರು ಬಿದ್ದ ಕಾರಣ ಐದು ದಿನಗಳಿಂದ ಯಾರೊಬ್ಬರ ಗಮನಕ್ಕೆ ಬಂದಿರಲಿಲ್ಲ.

ಮರದಲ್ಲಿ ಸಿಲುಕಿದ್ದ ಕಾರಿನಿಂದ ಸಾಕಷ್ಟು ಶ್ರಮಪಟ್ಟು ಮಹಿಳೆ ಹೊರ ಬಂದಿದ್ದಳು. ಹಸಿವು, ಬಾಯಾರಿಕೆಯಿಂದ ಬಳಲುತ್ತಿದ್ದ ಆಕೆ ಯಾರಾದರು ಸಿಗುತ್ತಾರಾ ಅಂತಾ ಸಮೀಪದ ರೈಲ್ವೇ ಹಳಿಯ ಕಡೆಗೆ ಸಾಗಿದ್ದಾಳೆ. ಆದರೆ ನಿಶ್ಯಕ್ತಿಗೆ ಒಳಗಾಗಿದ್ದ ಆಕೆ 500 ಮೀಟರ್ ದೂರ ನಡೆದು ಮಾರ್ಗ ಮಧ್ಯದಲ್ಲಿಯೇ ಕುಸಿದು ಬಿದ್ದಿದ್ದಾಳೆ. ಕಡೆಗೆ ಯಾರೊಬ್ಬರೂ ಬಾರದೇ ಇದ್ದಾಗ ಮಹಿಳೆ ಅನಾಥವಾಗಿ ಸಾವು ಬದುಕಿನ ಮಧ್ಯೆ ಕಾಲ ಕಳೆದಿದ್ದಾಳೆ.

ಅದೇ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಅಕ್ಟೋಬರ್ 18ರಂದು ರಸ್ತೆ ನಿರ್ವಹಣಾ ಸಿಬ್ಬಂದಿ ಬಂದಿದ್ದಾರೆ. ಈ ವೇಳೆ ರಸ್ತೆಗೆ ಅಡ್ಡವಾಗಿ ದನಗಳು ನಿಂತಿದ್ದರಿಂದ ವಾಹನದಿಂದ ಕೆಳಗೆ ಇಳಿದು ಬಂದು ದನಗಳನ್ನು ಓಡಿಸಿದ್ದಾರೆ. ಆಗ ಅವರು ಮರದ ಮೇಲೆ ಕಾರು ಬಿದ್ದಿರುವುದನ್ನು ಗಮನಿಸಿದ್ದಾರೆ. ಕಾರಿನಲ್ಲಿ ಯಾರಾದರೂ ಇದ್ದಾರಾ ಎಂದು ನೋಡಲು ಆ ಕಡೆಗೆ ಸಾಗಿದ್ದಾರೆ. ಕಾರಿನಲ್ಲಿ ಯಾರು ಇಲ್ಲದಿರುವುದನ್ನು ಅರಿತ ಅವರು, ಅಲ್ಲಿಯೇ ಮನುಷ್ಯರ ಹೆಜ್ಜೆಯ ಗುರುತನ್ನು ಕಂಡಿದ್ದಾರೆ. ಬಳಿಕ ಅದನ್ನು ಹಿಂಬಾಲಿಸಿ ಹೊರಟಾಗ, ಮಹಿಳೆ ಪತ್ತೆ ಆಗಿದ್ದಾಳೆ.

ಸಿಬ್ಬಂದಿ ತಕ್ಷಣವೇ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಪೊಲೀಸರು ಹೆಲಿಕಾಪ್ಟರ್ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.

ಆಹಾರ-ನೀರು ಸಿಗದೇ ಮಹಿಳೆ ಅಸ್ವಸ್ಥಗೊಂಡ ಪರಿಣಾಮ ಆಕೆಯ ಕಣ್ಣುಗಳು ಊದಿಕೊಂಡಿತ್ತು. ಅಪಘಾತದಲ್ಲಿ ಆಕೆಯ ಪಕ್ಕೆಲುಬುಗಳು ಮುರಿದಿವೆ. ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟಾಗಿದೆ ಎಂದು ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *