ನವದೆಹಲಿ: ಲೋಕಸಭಾ ಚುನಾವಣೆಯವರೆಗೂ ಮೋದಿ ಸರ್ಕಾರಕ್ಕೆ ಅಮೆರಿಕದಿಂದ ಸ್ವಲ್ಪ ರಿಲೀಫ್ ಸಿಕ್ಕಿದ್ದು, ಇರಾನ್‍ನಿಂದ ತೈಲ ಖರೀದಿಗೆ ಮೇ ಮೊದಲ ವಾರದ ತನಕ ಭಾರತಕ್ಕೆ ಅನುಮತಿ ನೀಡಿದೆ.
ಇರಾನ್‍ನಿಂದ ತೈಲ ಖರೀದಿಗೆ ಅಮೆರಿಕ ನಿರ್ಬಂಧ ವಿಧಿಸಿದ್ದು ನವೆಂಬರ್ 4 ರಿಂದ ಜಾರಿಯಾಗಿದೆ. ಈ ನಿರ್ಬಂಧದಿಂದ ಭಾರತ, ಜಪಾನ್, ಚೀನಾ, ದಕ್ಷಿಣ ಕೊರಿಯಾ ಸೇರಿದಂತೆ 8 ರಾಷ್ಟ್ರಗಳಿಗೆ ವಿನಾಯಿತಿ ಸಿಕ್ಕಿದೆ. ಹಾಗೆಂದ ಮಾತ್ರ ಪೂರ್ಣ ವಿನಾಯಿತಿ ಸಿಕ್ಕಿಲ್ಲ. ಮೇವರೆಗೆ ತೈಲವನ್ನು ಖರೀದಿ ಮಾಡಬಹುದು ಎಂದು ಅಮೆರಿಕ ತಿಳಿಸಿದೆ.
Advertisement
Advertisement
ಒಟ್ಟು 180 ದಿನಗಳವರೆಗೆ ವಿನಾಯಿತಿಯನ್ನು ನೀಡಿದ್ದು ಈ ಡೆಡ್‍ಲೈನ್ ಒಳಗಡೆ ವಿನಾಯಿತಿ ಪಡೆದ ದೇಶಗಳು ಪರ್ಯಾಯ ಮಾರ್ಗವನ್ನು ಹುಡುಕಬೇಕೆಂದು ಅಮೆರಿಕ ಸರ್ಕಾರ ಸೂಚಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
Advertisement
ಇರಾನಿಂದ ಭಾರತ ತೈಲ ಆಮದು ಮಾಡಿಕೊಳ್ಳುವುದರ ಜೊತೆಗೆ ಕೆಲವು ಆಹಾರ ವಸ್ತು, ಔಷಧೀಯ ಉತ್ಪನ್ನಗಳು ಮತ್ತು ಆಟೋಮೊಬೈಲ್ ವಸ್ತುಗಳನ್ನು ರಫ್ತು ಮಾಡುವುದಕ್ಕೆ ಅಮೆರಿಕ ಅನುಮತಿ ನೀಡಿದೆ.
Advertisement
ಮೇ ತಿಂಗಳ ಸಮಯದಲ್ಲಿ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದಿರುತ್ತದೆ. ಅಲ್ಲಿಯವರೆಗೂ ಅಮೆರಿಕ ನೀಡಿರುವ ತೈಲ ಆಮದು ಮಾಡಿಕೊಳ್ಳುವ ಅವಕಾಶ ಮೋದಿ ಸರ್ಕಾರಕ್ಕೆ ಶಕ್ತಿ ತುಂಬಿದೆ.
ಅಮೆರಿಕ ನಿರ್ಬಂಧ ಏಕೆ?
2015ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದ್ದ ಅಮೆರಿಕ, ಈಗ ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿ ಈ ವರ್ಷದ ಆರಂಭದಲ್ಲಿ ಮತ್ತೆ ನಿರ್ಬಂಧ ವಿಧಿಸಿತ್ತು. ನಿರ್ಬಂಧದ ಮೊದಲ ಹಂತ ಈಗಾಗಲೇ ಜಾರಿಯಲ್ಲಿದ್ದು, ಅದು ನವೆಂಬರ್ 4ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿದೆ. ಇರಾನ್‍ನಿಂದ ತೈಲ ಆಮದನ್ನು ಅಮೆರಿಕ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಲ್ಲದೇ ತನ್ನ ಮಿತ್ರ ರಾಷ್ಟ್ರಗಳು ಸಹ ಇರಾನ್ ನೊಂದಿಗೆ ಖರೀದಿಯನ್ನು ಸ್ಥಗಿತಗೊಳಿಸಲಿವೆ ಎನ್ನುವ ನಿರೀಕ್ಷೆಹೊಂದಿದ್ದೇವೆ. ಇರಾನ್ ಜೊತೆ ಯಾವುದೇ ರೀತಿಯ ವ್ಯವಹಾರವನ್ನು ಮುಂದುವರಿಸುವ ಯಾವುದೇ ದೇಶದೊಂದಿಗೆ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಹಣಕಾಸು ವ್ಯವಸ್ಥೆಯೊಳಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ಹೇಳಿತ್ತು.
ಇರಾನ್ ಜೊತೆ ತೈಲ ಖರೀದಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಮೊದಲನೇ ಸ್ಥಾನದಲ್ಲಿ ಚೀನಾ ಇದೆ. ಅಮೆರಿಕದ ಇರಾನ್ ನಿರ್ಬಂಧ ವಿಶ್ವದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಷ್ಟು ಪ್ರಮಾಣದ ತೈಲವನ್ನು ಇರಾನ್ ಹೊರತು ಪಡಿಸಿ, ಎಲ್ಲಿಂದ ಸಂಗ್ರಹಿಸುವುದು ಎನ್ನುವುದರ ಬಗ್ಗೆ ವಿವಿಧ ದೇಶಗಳು ಆತಂಕವನ್ನು ವ್ಯಕ್ತಪಡಿಸಿದ್ದವು.
ಈಗ ತೈಲ ದರ ಕಡಿಮೆಯಾಗುತ್ತಿದ್ದರೂ, ಕೆಲ ದಿನಗಳ ಹಿಂದೆ ಭಾರೀ ಏರಿಕೆಯಾಗಿತ್ತು. ತೈಲ ಖರೀದಿಗೆ ನಿರ್ಬಂಧ ಹೇರಿದ ಸುದ್ದಿಯಿಂದಾಗಿ ಷೇರು ಮಾರುಕಟ್ಟೆಗೂ ಭಾರೀ ಹೊಡೆತ ಬಿದ್ದಿತ್ತು. ಅಷ್ಟೇ ಅಲ್ಲದೇ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತಿತ್ತು. ಈಗ ಈ ನಿರ್ಬಂಧದಿಂದ ಭಾರತವನ್ನು ಹೊರಗೆ ಇಟ್ಟ ಹಿನ್ನೆಲೆಯಲ್ಲಿ ತೈಲ ದರ ಏರಿಕೆಯ ಭೀತಿಯಿಂದ ಭಾರತೀಯರು ಪಾರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv