ನವದೆಹಲಿ: 2026 ರಲ್ಲಿ ಭಾರತ ಮತ್ತು ಪಾಕಿಸ್ತಾನದ (India-Pakistan) ನಡುವೆ ಸಶಸ್ತ್ರ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂದು ಅಮೆರಿಕದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ (Think Tank) ಆದ ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್ ಎಚ್ಚರಿಕೆ ನೀಡಿದೆ. ಈ ಸಂಘರ್ಷದ ಸಾಧ್ಯತೆ ಮಧ್ಯಮ ಮಟ್ಟದ್ದು ಎಂದು ವರ್ಗೀಕರಿಸಲಾಗಿದ್ದು, ಸಂಘರ್ಷಕ್ಕೆ ಭಯೋತ್ಪಾದಕ ಚಟುವಟಿಕೆಗಳು ಕಾರಣ ಎನ್ನಲಾಗಿದೆ.
CFRನ ‘ಕಾನ್‌ಫ್ಲಿಕ್ಟ್ಸ್ ಟು ವಾಚ್ ಇನ್ 2026’ ವರದಿಯು ಅಮೆರಿಕದ ವಿದೇಶಾಂಗ ನೀತಿ ತಜ್ಞರ ಸಮೀಕ್ಷೆಯನ್ನಾಧರಿಸಿದ್ದು, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯು ಮತ್ತೆ ಯುದ್ಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾವೇ: ಟ್ರಂಪ್ ಬಳಿಕ ಈಗ ಚೀನಾ ಕ್ಯಾತೆ
2025ರ ಮೇ ತಿಂಗಳಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಉಗ್ರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಭಾರತದಿಂದ ‘ಆಪರೇಷನ್ ಸಿಂಧೂರ’ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜೈಶ್-ಇ-ಮೊಹಮ್ಮದ್ ಮತ್ತು ಲಶ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗಳ ಮುಖ್ಯ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲಾಗಿತ್ತು.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ಪ್ರಯತ್ನಿಸಿತ್ತು. ಇದರಿಂದ ಮೇ 7ರಿಂದ 10ರವರೆಗೆ ನಾಲ್ಕು ದಿನಗಳ ಕಾಲ ತೀವ್ರ ಸಂಘರ್ಷ ನಡೆದಿತ್ತು. ಇದು 1999ರ ಕಾರ್ಗಿಲ್ ಯುದ್ಧದ ನಂತರದ ಅತ್ಯಂತ ತೀವ್ರ ಸಂಘರ್ಷವೆಂದು ಪರಿಗಣಿಸಲಾಗಿದೆ. ಈ ಸಂಘರ್ಷದ ನಂತರ ಯುದ್ಧವಿರಾಮ ಒಪ್ಪಂದವಾದರೂ, ಉಭಯ ದೇಶಗಳ ನಡುವೆ ಉದ್ವಿಗ್ನತೆ ಮುಂದುವರಿದಿದೆ.
ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ, ಸಂಘರ್ಷದ ನಂತರ ಉಭಯ ದೇಶಗಳು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿವೆ. ಭಾರತ ಡ್ರೋನ್‌ಗಳು, ಏರ್-ಟು-ಏರ್ ಕ್ಷಿಪಣಿಗಳು ಸೇರಿದಂತೆ ಭಾರೀ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದೆ. ಪಾಕಿಸ್ತಾನ ಕೂಡ ಟರ್ಕಿ ಮತ್ತು ಚೀನಾದಿಂದ ಡ್ರೋನ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಪಡೆಯಲು ಚರ್ಚೆ ನಡೆಸುತ್ತಿದೆ. ಇದನ್ನೂ ಓದಿ: ಕದನ ವಿರಾಮ ನಿರ್ಧಾರದಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ: ಚೀನಾಗೆ ಭಾರತ ತಿರುಗೇಟು
CFR ವರದಿಯು ಟ್ರಂಪ್ ಆಡಳಿತವು ಭಾರತ-ಪಾಕಿಸ್ತಾನ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸಿದೆ ಎಂದು ಉಲ್ಲೇಖಿಸಿದೆ. ಆದರೆ, ಹೆಚ್ಚುತ್ತಿರುವ ಉಗ್ರ ಚಟುವಟಿಕೆಗಳು ಮತ್ತು ಸೇನಾ ತಯಾರಿಯಿಂದ 2026ರಲ್ಲಿ ಮತ್ತೊಂದು ಸಂಘರ್ಷದ ಅಪಾಯವಿದೆ ಎಂದು ಎಚ್ಚರಿಕೆ ನೀಡಿದೆ.

