ವಾಷಿಂಗ್ಟನ್: ಇಂತಹ ನಿರ್ಣಾಯಕ ಸಮಯದಲ್ಲಿ ಭಾರತದಂತಹ (India) ಬಲಿಷ್ಠ ಮಿತ್ರ ರಾಷ್ಟ್ರದ ಸಂಬಂಧವವನ್ನ ಹಾಳುಮಾಡದಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ (Nikki Haley) ಎಚ್ಚರಿಸಿದ್ದಾರೆ.
ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಮುಂದಿನ 24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ ಮಾಡುವುದಾಗಿ ಟ್ರಂಪ್ (Donald Trump) ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗೆ ನಿಕ್ಕಿ ಹ್ಯಾಲಿ ಪ್ರತಿಕ್ರಿಯಿಸಿದ್ದು, ಟ್ರಂಪ್ ಅವರ ಪ್ರಸ್ತಾಪಗಳು ನಿರ್ಣಾಯಕ ಸಂದರ್ಭದಲ್ಲಿ ಭಾರತ-ಅಮೆರಿಕದ ಸಂಬಂಧಗಳನ್ನು ಹದಗೆಡಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ನಿಕ್ಕಿ, ಟ್ರಂಪ್ ಆಡಳಿತವು ದ್ವಿಮುಖ ನೀತಿಯನ್ನ ಅಳವಡಿಸಿಕೊಂಡಿದೆ. ಚೀನಾದಂತಹ ಶತ್ರುರಾಷ್ಟ್ರಕ್ಕೆ ವ್ಯಾಪಾರಾಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯ್ತಿ ನೀಡಿದೆ. ಆದ್ರೆ ಭಾರತದ ಮೇಲೆ ಕಠಿಣ ನಿರ್ಧಾರಕ್ಕೆ ಮುಂದಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸಬಾರದು ಅಂತ ಟ್ರಂಪ್ ಹೇಳ್ತಾರೆ, ಆದ್ರೆ ರಷ್ಯಾ ಮತ್ತು ಇರಾನ್‌ನ ಅತಿದೊಡ್ಡ ತೈಲ ಖರೀದಿದಾರ ಚೀನಾಗೆ 90 ದಿನಗಳ ಸುಂಕ ವಿನಾಯ್ತಿ ಕೊಡ್ತಾರೆ. ಇದು ಒಳ್ಳೆಯದಲ್ಲ. ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯತಿ ನೀಡಬೇಡಿ ಹಾಗೆಯೇ ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹದಗೆಡಿಸಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
24 ಗಂಟೆಯಲ್ಲಿ ಸುಂಕ ಗಣನೀಯ ಏರಿಕೆ
ಮುಂದಿನ 24 ಗಂಟೆಯಲ್ಲಿ ಭಾರತದ ಮೇಲೆ ಸುಂಕ ಗಣನೀಯ ಏರಿಕೆ ಮಾಡುವ ಎಚ್ಚರಿಕೆ ನೀಡಿದ್ದಾರೆ ಟ್ರಂಪ್. ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು (Tariff Threat) ಗಣನೀಯವಾಗಿ ಏರಿಕೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಭಾರತ ಲಾಭ ಮಾಡಿಕೊಳ್ಳುತ್ತಿದೆ
ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್ ಮಾತನಾಡಿದ್ದರು, ಭಾರತ ರಷ್ಯಾದಿಂದ (India-Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು.
ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.
2ನೇ ಅತೀ ದೊಡ್ಡ ಖರೀದಿದಾರ
ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.