ಅಮೆರಿಕದ ರಾಜಕಾರಣಿಗಳ ಮನೆಯೊಳಗೇ ಗುಂಡಿನ ದಾಳಿ – ಶಾಸಕಿ ಮೆಲಿಸ್ಸಾ, ಪತಿ ಹತ್ಯೆ; ಓರ್ವ ಸಂಸದನಿಗೆ ಗಾಯ

Public TV
2 Min Read
US Senator

– ದುಷ್ಕರ್ಮಿ ಹಿಟ್‌ಲಿಸ್ಟ್‌ನಲ್ಲಿ ಇನ್ನಷ್ಟು ರಾಜಕಾರಣಿಗಳ ಹೆಸರು ಬಹಿರಂಗ

ವಾಷಿಂಗ್ಟನ್:‌ ಅಮೆರಿಕದಲ್ಲಿ ಸಂಸದ ಜಾನ್‌ ಹಾಫ್‌ಮನ್‌ (John Hoffman) ಹಾಗೂ ಡೆಮಾಕ್ರಟಿಕ್ ಶಾಸಕಿ ಮೆಲಿಸ್ಸಾ ಹಾರ್ಟ್‌ಮನ್ (Melissa Hortman) ಮನೆಯೊಳಗೆ ಒಂದೇ ದಿನ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಯೊಬ್ಬ ನಡೆಸಿದ ದಾಳಿಯಲ್ಲಿ ಮೆಲಿಸ್ಸಾ ಮತ್ತು ಅವರ ಪತಿ ಸಾವನ್ನಪ್ಪಿದ್ದಾರೆ ಎಂದು ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಖಚಿತಪಡಿಸಿದ್ದಾರೆ. ಓರ್ವ ಸಂಸದ ಜಾನ್ ಹಾಫ್‌ಮನ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಿನ್ನಿಯಾಪೋಲಿಸ್‌ನ ಉಪನಗರ ಚಾಂಪ್ಲಿನ್‌ನಲ್ಲಿರುವ ಜಾನ್ ಹಾಫ್‌ಮನ್ ಮತ್ತು ಬ್ರೂಕ್ಲಿನ್ ಪಾರ್ಕ್‌ನಲ್ಲಿರುವ ಮೆಲಿಸ್ಸಾ ಹಾರ್ಟ್‌ಮನ್ ಅವರ ನಿವಾಸದಲ್ಲೇ ಗುಂಡಿನ ದಾಳಿ ನಡೆದಿದ್ದು, ರಾಜಕೀಯ ಕೋಲಾಹಲಕ್ಕೂ ಕಾರಣವಾಗಿದೆ. ಸ್ಥಳೀಯ ಅಧಿಕಾರಿಗಳು ಇದನ್ನು ಉದ್ದೇಶಿತ ದಾಳಿ ಎಂದು ಕರೆದಿದ್ದಾರೆ. ಬ್ರೂಕ್ಲಿನ್‌ ಮತ್ತು ಚಾಪಿಲನ್‌ ಮಿನ್ನಿಯಾಪೋಲಿಸ್ ಪ್ರಮುಖ ಉಪನಗರಗಳು.

USA

ಪ್ರಾಥಮಿಕ ತನಿಖೆ ಪ್ರಕಾರ.. ದುಷ್ಕರ್ಮಿಯು ತನ್ನನ್ನು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡಿದ್ದ. ಪೊಲೀಸ್‌ ಡ್ರೆಸ್‌ನಲ್ಲೇ ಸುತ್ತಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ದಾಳಿಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್, ದೇಶದಲ್ಲಿ ಎಲ್ಲ ರೀತಿಯ ರಾಜಕೀಯ ಹಿಂಸಾಚಾರದ ವಿರುದ್ಧ ನಾವು ನಿಲ್ಲಬೇಕು. ಇದಕ್ಕೆ ಕಾರಣರಾದವರಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತದೆ ಎಂದು ಹೇಳಿದ್ದಾರೆ.

ಹಿಟ್‌ಲಿಸ್ಟ್‌ನಲ್ಲಿ ಹಲವು ಜನಪ್ರತಿನಿಧಿಗಳ ಹೆಸರು ಬಹಿರಂಗ
ಈ ನಡುವೆ ಮಿನ್ನೇಸೋಟ ಪೊಲೀಸ್‌ ಮುಖ್ಯಸ್ಥರು ಶಂಕಿತನ ಕಾರಿನಲ್ಲಿದ್ದ ಪ್ಲ್ಯಾನಿಂಗ್‌ ಹಿಟ್‌ಲಿಸ್ಟ್‌ನ್ನು ಪತ್ತೆಹಚ್ಚಿದ್ದಾರೆ. ಈ ಲಿಸ್ಟ್‌ನಲ್ಲಿ ಹಲವು ಶಾಸಕರು ಹಾಗೂ ಜನಪ್ರತಿನಿಧಿಗಳ ಹೆಸರು ಇರುವುದು ಕಂಡುಬಂದಿದೆ. ಸಂಭಾವ್ಯ ದಾಳಿ ನಡೆಸಲು ದುಷ್ಕರ್ಮಿ ಹೆಸರು ಪಟ್ಟಿ ಮಾಡಿರುವುದು ಗೊತ್ತಾಗಿದೆ.

ಈಗಾಗಲೇ ತನಿಖೆ ಆರಂಭಿಸಿರುವ ಪೊಲೀಸರು ಹಿನ್ನೆಲೆ ಪರಿಶೀಲಿಸುತ್ತಿದ್ದಾರೆ. ದುಷ್ಕರ್ಮಿ ಒಬ್ಬನೇ ಇದ್ದಾನಾ ಅಥವಾ ಅವನ ಹಿಂದೆ ಬೇರೊಂದು ಗ್ಯಾಂಗ್‌ ಇದೆಯೇ ಎಂಬೆಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಶಂಕಿತನ ಹಿಟ್‌ಲಿಸ್ಟ್ ಆಧರಿಸಿ ಸಂಭಾವ್ಯ ದಾಳಿಯ ಹೆಸರುಗಳಿರುವ ಎಲ್ಲ ಸಂಸದರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಸ್ಥಳೀಯ ಆಡಳಿತ ಸಂಸ್ಥೆಗಳು ಎಫ್‌ಬಿಐ ಮತ್ತು ಇತರ ಫೆಡರಲ್ ಸಂಸ್ಥೆಗಳು ಈ ಕುರಿತು ಜಂಟಿಯಾಗಿ ತನಿಖೆ ನಡೆಸುತ್ತಿವೆ.

Share This Article