ವಾಷಿಂಗ್ಟನ್: ಅಮೆರಿಕದಲ್ಲಿ ಈ ಬಾರಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ (US presidential election) ಹಿನ್ನೆಲೆ ಹಾಲಿ ಅಧ್ಯಕ್ಷ ಜೋ ಬೈಡನ್ (Joe Biden) ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮುಖಾಮುಖಿಯಾಗಿ ಚರ್ಚೆ ನಡೆಸಿದ್ದಾರೆ.
ಈ ವೇಳೆ ಹಣದುಬ್ಬರ, ವಲಸಿಗರ ನಿಯಂತ್ರಣ, ಉಕ್ರೇನ್-ಇಸ್ರೇಲ್ ಯುದ್ಧಗಳ ಕುರಿತಂತೆ ಪರಸ್ಪರ ಪರ ವಿರೋಧ ಚರ್ಚೆ ನಡೆದಿದೆ. ಚರ್ಚೆ ಆರಂಭದಲ್ಲೇ ಟ್ರಂಪ್ ವಿರುದ್ಧ ಬೈಡನ್ ಅಕ್ರಮ ಲೈಂಗಿಕ ಆರೋಪಗಳ ಬಗ್ಗೆ ಮಾತಾಡಿದ್ದಾರೆ. ಬೈಡನ್ ಆಡಳಿತದ ಲೋಪಗಳನ್ನ ಒಂದೊಂದಾಗಿ ಎತ್ತಿ ತೋರಿಸುವ ಕೆಲಸವನ್ನ ಟ್ರಂಪ್ ಮಾಡಿದ್ದಾರೆ.
ಮಹಿಳೆಯೊಬ್ಬರಿಗೆ ಟ್ರಂಪ್ ಸಾರ್ವಜನಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಿಲಿಯನ್ ಡಾಲರ್ ಮೊತ್ತದ ದಂಡ ಪಾವತಿ ಮಾಡುವಂತೆ ಅಮೆರಿಕ ನ್ಯಾಯಾಲಯ ಆದೇಶಿಸಿತ್ತು. ಈ ಪ್ರಕರಣವನ್ನು ಬೈಡನ್ ಪ್ರಸ್ತಾಪ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹೆಂಡತಿ ಗರ್ಭಿಣಿಯಾಗಿದ್ದಾಗ, ನೀಲಿಚಿತ್ರ ತಾರೆಯೊಂದಿಗೆ ಇಡೀ ರಾತ್ರಿ ಕಳೆದಿದ್ದೆ ಎಂದು ಟ್ರಂಪ್ ವಿರುದ್ಧ ವೈಯಕ್ತಿಕ ಮಟ್ಟದ ಟೀಕೆ ಮಾಡಿದ್ದಾರೆ. ಈ ವೇಳೆ `ನೀನೊಬ್ಬ ಚಾರಿತ್ರ್ಯವಿಲ್ಲದ ಬೀದಿ ಬೆಕ್ಕು’ ಎಂದು ಬೈಡನ್ ಆಕ್ರೋಶ ಹೊರಹಾಕಿದ್ದಾರೆ.
ಜೋ ಬೈಡನ್ ಉಕ್ರೇನ್ ದೇಶಕ್ಕೆ ನೂರಾರು ದಶಲಕ್ಷ ಡಾಲರ್ ನೀಡಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ. ವೈಯಕ್ತಿಕ ಟೀಕೆ ಟಿಪ್ಪಣಿಗಳ ಬಳಿಕ ಉಭಯ ನಾಯಕರು ಅಮೆರಿಕದ ಆರ್ಥಿಕತೆ ಹಾಗೂ ಗರ್ಭಪಾತ ಕುರಿತಾದ ಕಾನೂನುಗಳು ಹಾಗೂ ಅಮೆರಿಕದ ತೆರಿಗೆ ಪದ್ಧತಿ ಕುರಿತಾಗಿ ಗಂಭೀರ ವಿಚಾರಗಳ ಕುರಿತಾಗಿಯೂ ಮಾತುಕತೆ ನಡೆಸಿದ್ದಾರೆ.