ವಾಷಿಂಗ್ಟನ್: ಅಮೆರಿಕಕ್ಕೆ (USA) ಆಮದಾಗುವ ವಸ್ತುಗಳ ಮೇಲೆ ಸುಂಕ ಸಮರ (Tariff War) ಆರಂಭಿಸಿದ್ದ ಡೊನಾಲ್ಡ್ ಟ್ರಂಪ್ (Donald Trump) ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡುವುದಾಗಿ ಘೋಷಿಸಿದ್ದಾರೆ.
ವಿದೇಶಿ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ವಿಧಿಸಿ ಇಡೀ ವಿಶ್ವಕ್ಕೇ ಶಾಕ್ ನೀಡಿದ್ದ ಟ್ರಂಪ್ ಈಗ 75 ದೇಶಗಳಿಗೆ ಸ್ವಲ್ಪ ರಿಲೀಫ್ ನೀಡಿದರೂ ಚೀನಾದ ಮೇಲಿನ ತೆರಿಗೆಯನ್ನು 104% ರಿಂದ 125%ಕ್ಕೆ ಏರಿಸಿ ಮತ್ತೆ ದೊಡ್ಡ ಹೊಡೆತ ನೀಡಿದ್ದಾರೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ
ತೆರಿಗೆ ಹೊಡೆತದಿಂದ ಯಾವೆಲ್ಲ ದೇಶಗಳು ಪಾರಾಗಿದೆ ಎಂಬ ವಿವರವನ್ನು ಟ್ರಂಪ್ ತಿಳಿಸಿಲ್ಲ. ಆದರೆ ಈ ಪಟ್ಟಿಯಲ್ಲಿ ಭಾರತವೂ (India) ಇರಬಹುದು ಎಂದು ಭಾವಿಸಲಾಗುತ್ತಿದೆ. ಭಾರತದ ಮೇಲೆ ಟ್ರಂಪ್ 26% ಪ್ರತಿ ತೆರಿಗೆ ಘೋಷಿಸಿದ್ದರು. ಟ್ರಂಪ್ ತೆರಿಗೆ ಸಮರ ಆರಂಭಿಸುವ ಮೊದಲೇ ಭಾರತ ಸರ್ಕಾರ ಅಮೆರಿಕದ ಜೊತೆ ವ್ಯಾಪಾರ ಸಂಬಂಧ ಮಾತುಕತೆ ನಡೆಸಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪ್ರತ್ರಿಕ್ರಿಯಿಸಿದ ಟ್ರಂಪ್, ನಾವು ತೆರಿಗೆ ವಿಧಿಸಿದ ಬಳಿಕ ಸುಮಾರು 75 ದೇಶಗಳು ತಮ್ಮ ತಪ್ಪು ಸರಿಪಡಿಸಿಕೊಂಡು ಪ್ರತಿ ತೆರಿಗೆ ಹಾಕದೇ ನಮ್ಮ ಜೊತೆಗೆ ಸಂಧಾನಕ್ಕೆ ಬಂದಿವೆ. ಹೀಗಾಗಿ ನಾನು ಅವುಗಳ ಮೇಲೆ ಹೇರಿದ್ದ ತೆರಿಗೆಯನ್ನು 90 ದಿನ ಮುಂದೂಡಲು ನಿರ್ಧರಿಸಿದ್ದೇನೆ. ಹೀಗಾಗಿ ಅವುಗಳ ಮೇಲೆ 10% ತೆರಿಗೆ ಮಾತ್ರ ಮುಂದುವರಿಯಲಿದೆ ಎಂದು ತಿಳಿಸಿದರು.
ಅಮೆರಿಕದ ಉತ್ಪನ್ನಗಳಿಗೆ ಚೀನಾ 84% ತೆರಿಗೆ ಹಾಕಿದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಹಲವು ದೇಶಗಳು ನಮ್ಮ ಜೊತೆ ಸಂಧಾನಕ್ಕೆ ಬಂದರೆ ಚೀನಾ ನಮ್ಮ ಮೇಲೆ ಪ್ರತಿ ತೆರಿಗೆಯನ್ನು ಹಾಕಿದೆ. ಹೀಗಾಗಿ ಕೂಡಲೇ ಜಾರಿಗೆ ಬರುವಂತೆ ಚೀನಾದಿಂದ ಆಮದಾಗುವ ವಸ್ತುಗಳಿಗೆ 125% ತೆರಿಗೆಯನ್ನು ಹೆಚ್ಚಿಸುತ್ತೇನೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಮ್ಮ ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಸರಕುಗಳ ಮೇಲಿನ ಟ್ಯಾರಿಫ್ 84%ಗೆ ಹೆಚ್ಚಿಸಿದ ಚೀನಾ
ತೆರಿಗೆ ಸಮರಕ್ಕೆ ಟ್ರಂಪ್ 90 ದಿನ ಬ್ರೇಕ್ ಹಾಕುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಯನ್ನು ಶ್ವೇತ ಭವನ (White House) ನಿರಾಕರಿಸಿತ್ತು. ಟ್ರಂಪ್ ಅವರು ನಾನು ಈ ನಿರ್ಧಾರದಿಂದ ಹಿಂಕ್ಕೆ ಸರಿಯಲ್ಲ ಎಂದಿದ್ದರು. ಆದರೆ ಈಗ ಟ್ರಂಪ್ ಅವರು ಯೂಟರ್ನ್ ಹೊಡೆದಿದ್ದಾರೆ.
ಜಗತ್ತಿನ ನಂಬರ್ 1 ಆರ್ಥಿಕತೆ ಹೊಂದಿರುವ ಅಮೆರಿಕ ಮತ್ತು ನಂಬರ್ 2 ಆರ್ಥಿಕತೆ ಹೊಂದಿರುವ ಚೀನಾದ ಮಧ್ಯೆ ವಾಣಿಜ್ಯ ಸಮರಕ್ಕೆ ವಿಶ್ವವೇ ತಲ್ಲಣಗೊಂಡಿತ್ತು. ಬುಧವಾರದಿಂದಲೇ ಅನ್ವಯ ಆಗುವಂತೆ ಪರಿಷ್ಕೃತ ತೆರಿಗೆಗಳು ವಿಶ್ವಾದ್ಯಂತ ಜಾರಿಯಾಗಿದ್ದರಿಂದ ಮಂಗಳವಾರ ವಿಶ್ವದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿತ್ತು.