– ಭೂದಾಳಿಗೆ 17 ಸಾವಿರ ತುಕಡಿಗಳು ಸಜ್ಜು
ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಇರಾನ್- ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ (American military base) ವಿರುದ್ಧ ಬಲವಾದ ಪ್ರತಿದಾಳಿ ನಡೆಸುತ್ತಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ, ಅಮೆರಿಕ ಈಗ ತನ್ನ ಮಿಲಿಟರಿ ಕಾರ್ಯತಂತ್ರವನ್ನು ಹೆಚ್ಚು ಆಕ್ರಮಣಕಾರಿಯನ್ನಾಗಿ ಮಾಡಿದೆ.
ಇರಾನ್ ಮೇಲಿನ ಭೂದಾಳಿಗೆ ಅಮೆರಿಕದ ಭೂ ಸೇನೆಯ 17 ಸಾವಿರ ತುಕಡಿಗಳು ಸಜ್ಜಾಗಿವೆ. ಅಮೆರಿಕ ಅಧ್ಯಕ್ಷರ ಅಂತಿಮ ಅನುಮೋದನೆಗೆ ಕಾಯುತ್ತಿವೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಕಳೆದ 1 ತಿಂಗಳಿಂದ ನಡೆಯುತ್ತಿರುವ ವೈಮಾನಿಕ ಕಾರ್ಯಾಚರಣೆಗೆ (Air Strikes) ಬಗ್ಗದ ಇರಾನ್ ವಿರುದ್ಧ ಭೂಸೇನೆಯನ್ನು ಯುದ್ಧಭೂಮಿಗೆ ಇಳಿಸಲು ಟ್ರಂಪ್ ಆಡಳಿತ ಆಲೋಚನೆ ನಡೆಸಿದೆ. ಇದರೊಂದಿಗೆ ಭಾನು, ಭೂಮಿ, ನೀರು ಮೂರು ಕಡೆಗಳಿಂದಲೂ ಇರಾನ್ ಮೇಲೆ ಭೀಕರ ದಾಳಿ ನಡೆಸಲು ಸಜ್ಜಾಗಿದೆ. ಇದರ ಭಾಗವಾಗಿ, ಅಮೆರಿಕ ತನ್ನ ಬೃಹತ್ ಯುದ್ಧನೌಕೆ ಯುಎಸ್‌ಎಸ್ ಟ್ರಿಪೋಲಿಯನ್ನ ನಿಯೋಜಿಸಿದೆ, ಸುಮಾರು 3,500 ನೌಕಾಪಡೆಗಳೊಂದಿಗೆ ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಪ್ರದೇಶಕ್ಕೆ ಆಗಮಿಸಿದೆ. ಈ ಹಡಗು ಹೆಲಿಕಾಪ್ಟರ್‌ಗಳು, ಎಫ್-35 ಬಿ ಜಂಟಿ ಸ್ಟ್ರೈಕ್ ಫೈಟರ್ ಜೆಟ್‌ಗಳನ್ನ ಸಾಗಿಸಬಲ್ಲದಾಗಿದೆ. ಆಧುನಿಕ ಯುದ್ಧನೌಕೆ ಯುಎಸ್ ಟ್ರಿಪೋಲಿ (USS Tripoli) ಮಧ್ಯಪ್ರಾಚ್ಯಕ್ಕೆ ಆಗಮಿಸಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ, ಖಾರ್ಗ್ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡುವ ಭೀತಿ ಎದುರಾಗಿದೆ.
ಆರಂಭಿಕ ಹಂತದಲ್ಲಿ ಪ್ರಮುಖ ದ್ವೀಪ ಪ್ರದೇಶಗಳು, ಪರಮಾಣು ಕೇಂದ್ರಗಳ ಮೇಲೆ ಹಿಡಿತ ಸಾಧಿಸುವ ಗುರಿಯೊಂದಿಗೆ ಭೂದಾಳಿಗೆ ಯೋಜನೆ ರೂಪಿಸಲಾಗಿದೆ. ಆದರೆ, ಪ್ರಬಲ ಭೂ ಸೇನೆ ಹೊಂದಿರುವ ಇರಾನ್ ವಿರುದ್ಧ ಭೂದಾಳಿ ಅಪಾಯಕಾರಿ ಎಂಬುದು ಟ್ರಂಪ್ ಆಡಳಿತಕ್ಕೆ ಅರಿವಿದೆ. 6 ಲಕ್ಷ ಯೋಧರು, 3.50 ಲಕ್ಷ ಸೇನಾ ತುಕಡಿಗಳು, 1.90 ಲಕ್ಷ ಐಆರ್‌ಜಿಸಿ ಯೋಧರ ಪಡೆ ಹೊಂದಿರುವ ಇರಾನ್, ಭೂದಾಳಿಗೆ ಪ್ರಬಲ ಪ್ರತಿರೋಧ ತೋರುವ ಸಾಧ್ಯತೆಗಳಿವೆ.

ಈ ಮಧ್ಯೆ ಅಗತ್ಯಬಿದ್ದರೆ, ಇನ್ನೂ 10 ಸಾವಿರ ಭೂದಳ ಪಡೆಗಳನ್ನು ಕಳುಹಿಸಲು ಪೆಂಟಗನ್ ನಿರ್ಧರಿಸಿದೆ. ಅಲ್ಲದೇ ಯುನೈಟೆಡ್ ಸ್ಟೇಟ್ಸ್ ಮೆರೈನ್ ಕಾರ್ಪ್ಸ್ ವಿಭಾಗದ 5,000 ಹೆಚ್ಚುವರಿ ಸೈನಿಕರು ಮತ್ತು ಸಾವಿರಾರು ಪ್ಯಾರಾಟ್ರೋಫ್‌ಗಳನ್ನ ಸೇರಿಸುವುದಾಗಿ ಹೇಳಿದೆ.
ಸದ್ಯ ಹೊಡ ಪಡೆಗಳನ್ನ ನಿಖರವಾಗಿ ಎಲ್ಲಿ ಇರಿಸಲಾಗುತ್ತದೆ ಅನ್ನೋದನ್ನ ಅಮೆರಿಕದ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದ್ರೆ ಪರ್ಷಿಯನ್ ಕೊಲ್ಲಿಯಲ್ಲಿ ನಿಯೋಜಿಸುವ ಸಾಧ್ಯಯಿದೆ. ತೈಲ ರಫ್ತು ಮಾರ್ಗಗಳಾದ ಹಾರ್ಮುಜ್ ಜಲಸಂಧಿ ಮತ್ತು ಖಾರ್ಗ್ ದ್ವೀಪದಂತಹ ಸೂಕ್ಷ್ಮ ಪ್ರದೇಶಗಳ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆಗಳಿವೆ.

