– ಯಾವುದೇ ಬೆದರಿಕೆಯಿಂದ ಮುಚ್ಚುತ್ತಿಲ್ಲ
– ವೈಯಕ್ತಿಕ ಕಾರಣಗಳಿಂದಾಗಿ ಸಂಸ್ಥೆಯನ್ನು ಮುಚ್ಚುತ್ತಿದ್ದೇವೆ
ವಾಷಿಂಗ್ಟನ್: ಅದಾನಿ ಸಮೂಹ ಕಂಪನಿಗಳನ್ನು (Adani Group) ಗುರಿಯಾಗಿ ವರದಿ ಪ್ರಕಟಿಸಿ ಸಂಚಲನ ಉಂಟುಮಾಡಿದ್ದ ಅಮೆರಿಕ ಶಾರ್ಟ್ ಸೆಲ್ಲಿಂಗ್ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್ (Hindenburg Research) ಬಾಗಿಲು ಮುಚ್ಚಿದೆ.
ಹಿಂಡನ್‌ಬರ್ಗ್ ರಿಸರ್ಚ್ ಸಂಸ್ಥೆಯನ್ನು ವಿಸರ್ಜಿಸಲು ನಿರ್ಧರಿಸಿದ್ದೇನೆ ಎಂದು ಎಂದು ಸಂಸ್ಥಾಪಕ ನೇಟ್ ಆಂಡರ್ಸನ್ (Nate Anderson) ಹೇಳಿದ್ದಾರೆ.
Advertisement
ಅಚ್ಚರಿ ಏನೆಂದರೆ ಡೊನಾಲ್ಡ್ ಟ್ರಂಪ್ (Donald Trump) ಅವರು ಜ.20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಲು 4 ದಿನ ಮೊದಲೇ ಹಿಂಡನ್‌ಬರ್ಗ್ ಮುಚ್ಚುವ ನಿರ್ಧಾರ ಪ್ರಕಟವಾಗಿದೆ.
Advertisement
ಈ ವಿಚಾರದ ಬಗ್ಗೆಯೂ ಅಂಡರ್ಸನ್ ಪ್ರತಿಕ್ರಿಯಿಸಿ, ಈ ಶಾರ್ಟ್ ಸೆಲ್ಲರ್ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಬೆದರಿಕೆ ಅಥವಾ ವೈಯಕ್ತಿಕ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಸ್ಥೆಯನ್ನು ಮುಚ್ಚಲು ನಿರ್ದಿಷ್ಟ ಕಾರಣ ಏನು ಎನ್ನುವುದನ್ನು ಹೇಳಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸಂಸ್ಥೆಯನ್ನು ಮುಚ್ಚುತ್ತಿದ್ದೇವೆ. ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡಲು ತಾನು ಈ ನಿರ್ಧಾರ ಮಾಡಿದ್ದಾಗಿ ಆಂಡರ್ಸನ್ ತಿಳಿಸಿದ್ದಾರೆ.
Advertisement
Advertisement
2017ರಲ್ಲಿ ಸ್ಥಾಪನೆಯಾದ ಹಿಂಡನ್‌ಬರ್ಗ್ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳ ಮೋಸವನ್ನು ಬಯಲು ಮಾಡುವುದು ತನ್ನ ಉದ್ದೇಶ ಎಂದು ಹೇಳಿಕೊಂಡಿತ್ತು. ಹಲವಾರು ಕಂಪನಿಗಳ ಬಗ್ಗೆ ವರದಿ ಪ್ರಕಟಿಸಿತ್ತು. ಇದರಿಂದ ಹಲವು ಕಂಪನಿಗಳಿಗೆ ಆರ್ಥಿಕವಾಗಿ ಬಹಳ ಸಮಸ್ಯೆಯಾಗಿತ್ತು. ಈ ಹಿಂಡನ್‌ಬರ್ಗ್ ಸಂಸ್ಥೆಯ ಮೇಲೆ ಕಂಪನಿಗಳು ಕೇಸ್ ಹಾಕಿದ್ದವು.
2023ರಲ್ಲಿ ಅದಾನಿ ಕಂಪನಿಯನ್ನು ಗುರಿಯಾಗಿಸಿದ್ದ ಹಿಂಡನ್‌ಬರ್ಗ್ ನಂತರ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧವೇ ವರದಿ ಪ್ರಕಟಿಸಿತ್ತು. ಈ ವರದಿಗಳು ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗಿತ್ತು. ಅದಾನಿ ಕಂಪನಿಗಳ ಷೇರುಗಳ ಮೌಲ್ಯ ಭಾರೀ ಕುಸಿತಗೊಂಡಿತ್ತು.
ಅದಾನಿ ಕಂಪನಿಗಳ ವಿರುದ್ಧ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿತ್ತು. ಈ ಸಮಿತಿ ಅದಾನಿ ಕಂಪನಿ ಕೃತಕವಾಗಿ ಷೇರುಗಳ ಬೆಲೆ ಹೆಚ್ಚಳ ಮಾಡಿಲ್ಲ ಎಂದು ವರದಿ ಸಲ್ಲಿಸಿತ್ತು.
ಲೋಕಸಭಾ ಅಧಿವೇಶನ ಆರಂಭಗೊಳ್ಳುವ ಸಮಯದಲ್ಲೇ ಹಿಂಡನ್‌ಬರ್ಗ್ ವರದಿ ಪ್ರಕಟ ಮಾಡುತ್ತಿತ್ತು. ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವು. ಇದಕ್ಕೆ ಬಿಜೆಪಿ ಪ್ರತಿಕ್ರಿಯಿಸಿ ಹಿಂಡನ್‌ಬರ್ಗ್‌ನಲ್ಲಿ ಜಾರ್ಜ್ ಸೊರೊಸ್ (George Soros) ಮುಖ್ಯ ಹೂಡಿಕೆದಾರ. ಭಾರತದ ಆರ್ಥಿಕ ಬೆಳವಣಿಗೆಯನ್ನು ಹಳಿತಪ್ಪಿಸಲು ವಿದೇಶದಿಂದ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿತ್ತು.
ಹಿಂಡನ್‌ಬರ್ಗ್ ಹೆಸರಿನಲ್ಲೇ ಶಾರ್ಟ್ ಸೆಲ್ಲಿಂಗ್ ಕಂಪನಿಯಾಗಿದೆ. ಉದ್ದೇಶಪೂರ್ವಕವಾಗಿ ತನ್ನ ಗ್ರಾಹಕರಿಗೆ ಲಾಭ ಮಾಡಲು ಈ ವರದಿ ಬಿಡುಗಡೆ ಮಾಡುತ್ತಿದೆ ಎಂಬ ಆರೋಪ ಬಂದಿತ್ತು.
ಏನಿದು ಶಾರ್ಟ್‌ಸೆಲ್ಲಿಂಗ್?
ಶಾರ್ಟ್ ಸೆಲ್ಲಿಂಗ್ ಎನ್ನುವುದು ಹೂಡಿಕೆಯ ತಂತ್ರವಾಗಿದ್ದು ಇದಕ್ಕೆ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಕಂಪನಿಯ ಷೇರು ಮೌಲ್ಯ ಕುಸಿಯಬಹುದು ಎಂಬುದನ್ನು ಮೊದಲೇ ಊಹಿಸಿ ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ ನಂತರ ಆ ಕಂಪನಿಯ ಷೇರು ಮೌಲ್ಯ ಕುಸಿತಗೊಂಡಾಗ ಅವುಗಳನ್ನು ಕಡಿಮೆ ಬೆಲೆಗೆ ಮರು ಖರೀದಿಸಿ ಲಾಭ ಮಾಡುವುದಕ್ಕೆ ಶಾರ್ಟ್ ಸೆಲ್ಲಿಂಗ್ ಎಂದು ಕರೆಯಲಾಗುತ್ತದೆ. ಇದು ಒಂದು ರೀತಿಯಲ್ಲಿ ಅಪಾಯದ ಕಾರ್ಯಾಚರಣೆ. ಒಂದು ವೇಳೆ ಷೇರುಗಳ ಮೌಲ್ಯ ಕಡಿಮೆ ಆಗದೇ ಇದ್ದರೆ ಶಾರ್ಟ್ ಸೆಲ್ಲಿಂಗ್ ಟ್ರೇಡರ್‌ಗಳಿಗೆ ನಷ್ಟವಾಗುತ್ತದೆ.
ಅದಾನಿಯಿಂದ ಎಫ್‌ಪಿಒ ರದ್ದು:
20,000 ಕೋಟಿ ರೂ. ಮೌಲ್ಯದ ಎಫ್‌ಪಿಒಗೆ (ಮುಂದುವರಿದ ಸಾರ್ವಜನಿಕ ಕೊಡುಗೆ ಅಥವಾ ಹೊಸದಾಗಿ ಷೇರುಗಳನ್ನು ಮಾರುಕಟ್ಟೆ ಬಿಡುಗಡೆ) ಅದಾನಿ ಕಂಪನಿ 2023ರ ಜನವರಿಯಲ್ಲಿ ಚಾಲನೆ ನೀಡಿತ್ತು. ಪ್ರತಿ ಷೇರಿಗೆ 3,112ರಿಂದ 3,276 ರೂ. ಆಫರ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಿಂಡನ್‌ಬರ್ಗ್ ಅದಾನಿ ಕಂಪನಿ ವಿರುದ್ಧ ಸಂಶೋಧನಾ ವರದಿ ಬಿಡುಗಡೆ ಮಾಡಿತ್ತು. ವರದಿ ಬಳಿಕ ಅದಾನಿ ಕಂಪನಿಯ ಷೇರಿನ ಮೌಲ್ಯ ಕುಸಿತ ಕಂಡಿದ್ದರೂ ಎಫ್‌ಪಿಒ ಬಿಡ್ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಷೇರುಗಳ ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ನಂತರ 20 ಸಾವಿರ ಕೋಟಿ ರೂ. ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಎಫ್‌ಪಿಒ ಪ್ರಕ್ರಿಯೆಯನ್ನೇ ಅದಾನಿ ಸಮೂಹ ರದ್ದು ಮಾಡಿತ್ತು. ನಮ್ಮ ಷೇರು ಮೌಲ್ಯ ಕುಸಿದಿದೆ. ಈ ಸಂದರ್ಭದಲ್ಲಿ ಎಫ್‌ಪಿಒನೊಂದಿಗೆ ಮುಂದುವರಿಯುವುದು ನೈತಿಕವಾಗಿ ಸರಿಯಲ್ಲ ಎಂದು ಹೇಳಿ ಹೂಡಿಕೆದಾರರ ಹಣವನ್ನು ಮರಳಿಸಲಾಗುವುದು ಎಂದು ಗೌತಮ್ ಅದಾನಿ ತಿಳಿಸಿದ್ದರು.