ಮುಂಬೈ: ಐರಾವತ ಬೆಡಗಿ ಊರ್ವಶಿ ರೌಟೇಲಾ ಕಾರ್ಯಕ್ರಮವೊಂದರಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಆಗಿ ಪಡೆದಿದ್ದಾರೆ.
ಡಿಸೆಂಬರ್ 31ರ ರಾತ್ರಿ ಮಹಾರಾಷ್ಟ್ರದ ಪುಣೆಯಲ್ಲಿ ಹೊಸ ವರ್ಷ ಆಚರಿಸಲು ಬಾಲಿವುಡ್ ಕಾರ್ನಿವಲ್ 2020 ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಗಂಟೆ ಡ್ಯಾನ್ಸ್ ಮಾಡಲು ಊರ್ವಶಿ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ಇದುವರೆಗೂ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಇತರ ಕಲಾವಿದರು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ಸದ್ಯ 3 ಕೋಟಿ ಸಂಭಾವನೆ ಪಡೆಯುವ ಮೂಲಕ ಊರ್ವಶಿ ಬೇರೆ ಕಲಾವಿದರ ದಾಖಲೆಯನ್ನೇ ಮುರಿದಿದ್ದಾರೆ.
ಹೊಸ ವರ್ಷದ ಕಾರ್ಯಕ್ರಮದಲ್ಲಿ ಊರ್ವಶಿ, ‘ಡ್ಯಾಡಿ ಮಮ್ಮಿ’, ‘ಹಸಿನೋ ಕಾ ದೀವಾನಾ’ ಹಾಗೂ ತಾವು ನಟಿಸಿದ ‘ಪಾಗಲ್‍ಪಂತಿ’ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಡ್ಯಾನ್ಸ್ ಮಾಡುವ ಮೊದಲು ಊರ್ವಶಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋ ಹಾಕುವ ಮೂಲಕ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದರು.
ಊರ್ವಶಿ ಕೊನೆಯದಾಗಿ ಪಾಗಲ್‍ಪಂತಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರನ್ನು ಹೊರತುಪಡಿಸಿ ನಟ ಜಾನ್ ಅಬ್ರಾಹಂ, ಅನಿಲ್ ಕಪೂರ್, ಅರ್ಷದ್ ವಾರ್ಸಿ, ಕೃತಿ ಕರಾಬಂಧ, ಇಲಿಯಾನಾ ಡಿಕ್ರೂಸ್ ನಟಿಸಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಲಿಲ್ಲ.