Karnataka

ಸರ್ಕಾರಿ ಶಾಲೆಯನ್ನು ಧಾರ್ಮಿಕ ಚಟುವಟಿಗಳಿಗೆ ಬಳಸಿಕೊಂಡ ಮುಸ್ಲಿಂ ಧರ್ಮಗುರು

Published

on

Share this

ಮಂಡ್ಯ: ಮಕ್ಕಳ ಕೊರತೆಯಿಂದ ಮುಚ್ಚಿ ಹೋಗಿದ್ದ ಸರ್ಕಾರಿ ಉರ್ದು ಶಾಲೆಯನ್ನು ಮುಸ್ಲಿಂ ಧರ್ಮ ಗುರುಗಳು ಅಕ್ರಮವಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡಿರುವ ಪ್ರಕರಣ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಬಯಲಿಗೆ ಬಂದಿದೆ.

ಹೋಬಳಿ ಕೇಂದ್ರವಾದ ಸಂತೇಬಾಚಹಳ್ಳಿ ಗ್ರಾಮದಲ್ಲಿ ಇಲ್ಲಿನ ಮಸೀದಿಯ ಸಮೀಪ ಸರ್ಕಾರಿ ಉರ್ದು ಶಾಲೆಯೊಂದಿದೆ. ಕಳೆದ 45 ವರ್ಷಗಳ ಹಿಂದೆ ಈ ಶಾಲೆ ನಿರ್ಮಾಣವಾಗಿದ್ದು, ಸರ್ಕಾರಿ ಶಾಲೆಗೆ ಪ್ರಾಥಮಿಕ ಶಿಕ್ಷಣ ಇಲಾಖೆಯ ವತಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸವಲತ್ತುಗಳೂ ಲಭ್ಯವಾಗಿವೆ. ಶಾಲೆಯ ಹೊರಗೋಡೆಗಳ ಮೇಲೂ ಮಕ್ಕಳ ಕಲಿಕೆಗೆ ಪೂರಕವಾದ ಚಿತ್ರಗಳನ್ನು ಬಿಡಿಸಲಾಗಿದೆ. ಬಡ ಮುಸ್ಲಿಂ ಮಕ್ಕಳ ಕಲಿಕೆಗಾಗಿ ಸರ್ಕಾರ ಬಿಸಿಯೂಟ ಸಿದ್ದಪಡಿಸಿಲು ಕಳೆದ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅನ್ನಪೂರ್ಣ ಅಡುಗೆ ಮನೆ ನಿರ್ಮಿಸಿ ಅಡುಗೆ ಮಾಡಲು ಅಗತ್ಯವಾದ ಪಾತ್ರೆಗಳು, ಸಿಲಿಂಡರ್, ಸ್ಟೌವ್ ಮತ್ತಿತರ ಎಲ್ಲಾ ಪರಿಕರಗಳನ್ನು ಪೂರೈಕೆ ಮಾಡಿದೆ. ಉರ್ದು ಶಾಲೆಯ ಆವರಣದಲ್ಲಿ ಎರಡು ಕೊಠಡಿಗಳು ಇದೆ. ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಕೆಲವು ಕಾಲ ಮುಚ್ಚಿದ್ದ ಹಿನ್ನಲೆಯಲ್ಲಿ ಮಕ್ಕಳ ಆಗಮನವಾಗದೆ ಶಾಲೆ ಕೆಲವು ಕಾಲ ಮುಚ್ಚಿದೆ.

ಮುಚ್ಚಿದ್ದ ಶಾಲೆಯನ್ನು ಆರಂಭಿಸುವ ಮುನ್ನವೇ ಹೊರಗಿನಿಂದ ಬಂದ ಕೆಲವು ಧಾರ್ಮಿಕ ಮುಖಂಡರು ಸರ್ಕಾರಿ ಶಾಲೆಯನ್ನು ಆಕ್ರಮಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗೆ ಹಸಿರು ಬಣ್ಣ ಬಳಿದು ಹೊರ ರಾಜ್ಯದ ಶ್ಯಾಮ್ ಕ್ಯೂಮರ್ ಎನ್ನುವ ಮುಲ್ಲಾ ಒಬ್ಬ ಇಲ್ಲಿ ವಾಸ್ತವ್ಯ ಹೂಡಿದ್ದಾನೆ. ಸರ್ಕಾರಿ ಶಾಲೆಯೊಳಗೆ ಅಕ್ರಮ ಕೊಠಡಿಯೊಂದನ್ನು ನಿರ್ಮಿಸಿರುವ ಈತ ಸರ್ಕಾರಿ ಶಾಲೆಯ ಎಲ್ಲಾ ಅಡುಗೆ ಪರಿಕರಗಳನ್ನು ತನ್ನ ಆಸ್ತಿಯನ್ನಾಗಿಸಿಕೊಂಡಿದ್ದಾನೆ. ಪದೇ ಪದೇ ಇಲ್ಲಿಗೆ ಹೊರರಾಜ್ಯದ ಆಗಂತಕರು ಬಂದು ಹೋಗುತ್ತಿದ್ದಾರೆ ಎನ್ನಲಾಗಿದೆ. ಹೊರ ರಾಜ್ಯದ ಕೆಲವು ಮಕ್ಕಳು ಇಲ್ಲಿ ಬೀಡು ಬಿಟ್ಟಿದ್ದವೆಂದು ಹೇಳಲಾಗಿದ್ದು ಸ್ಥಳೀಯರು ಪ್ರಶ್ನಿಸಿದಾಗ ಇಲ್ಲಿದ್ದ ಬಾಲಕರನ್ನು ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಶೆಡ್ ಮುಂದೆ ಜನ ನಿಲ್ಲಿಸಿ ಮಾಲೀಕನಿಂದ್ಲೇ ತೋಟದ ಕೆಲಸದಾಕೆಯ ಮೇಲೆ ಅತ್ಯಾಚಾರ!

ಶಾಲೆಯನ್ನು ಬಾಬಯ್ಯನ ದೇವಸ್ಥಾನವನ್ನಾಗಿಸಿದ ಗ್ರಾಮ ಪಂಚಾಯತ್:
ಸದರಿ ಸರ್ಕಾರಿ ಉರ್ದುಶಾಲೆ ರಾಜ್ಯ ಸರ್ಕಾರದ ಆಸ್ತಿಯಾಗಿದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇರ ನಿಯಂತ್ರಣದಲ್ಲಿದೆ. ಸರ್ಕಾರಿ ಶಾಲೆಯನ್ನು ಬಾಬಯ್ಯನ ದೇವಸ್ಥಾನ ಎಂದು ಹೇಳಿ ಇಲ್ಲಿ ಗ್ರಾಮ ಪಂಚಾಯತ್ ಸರ್ಕಾರಿ ಶಾಲೆಯನ್ನೇ ಧಾರ್ಮಿಕ ಕೇಂದ್ರದ ಆಸ್ತಿಯನ್ನಾಗಿ ಅಕ್ರಮವಾಗಿ ಈ-ಸ್ವತ್ತು ಮಾಡಿಕೊಟ್ಟಿದ್ದು ಈಗ ಬಯಲಿಗೆ ಬಂದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸರ್ಕಾರಿ ಶಾಲೆಯನ್ನು ಅಕ್ರಮ ಧಾರ್ಮಿಕ ಕೇಂದ್ರವನ್ನಾಗಿಸಿಕೊಂಡಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಲ್ಲದೆ ಅಕ್ರಮ ವಾಸಿಗಳನ್ನು ಸ್ಥಳದಿಂದ ಖಾಲಿಮಾಡಿಸಿ ಶಾಲೆಯನ್ನು ನಮ್ಮ ಇಲಾಖೆಯ ವಶಕ್ಕೆ ಪಡೆಯಲಾಗುವುದು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಅಗತ್ಯ ಸಿದ್ಧತೆ ನಡೆಸುತ್ತಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರಿಂದ್ಲೇ ಮೀಸಲಾತಿ ಆಕ್ರೋಶ – ಇಕ್ಕಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ

ಸರ್ಕಾರಿ ಶಾಲೆಯನ್ನು ಸರ್ಕಾರದ ಗಮನಕ್ಕೆ ಬರದಂತೆ ಬಾಬಯ್ಯನ ದೇವಸ್ಥಾನ ಎಂದು ಈ-ಸ್ವತ್ತು ಮಾಡಿ ಅಕ್ರಮ ದಾಖಲೆ ಮಾಡಿಕೊಟ್ಟಿರುವ ಸಂತೇಬಾಚಹಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಅವರನ್ನು ತಕ್ಷಣವೇ ಅಮಾನತ್ತು ಮಾಡಬೇಕು. ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಅನ್ಯರ ಹೆಸರಿಗೆ ಮಾಡಿ ಗ್ರಾಮದಲ್ಲಿ ಧಾರ್ಮಿಕ ಕಲಹಕ್ಕೆ ನಾಂದಿ ಹಾಡಿರುವ ಪಿಡಿಓ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಉರ್ದು ಶಾಲೆಯನ್ನು ಮತ್ತೆ ಶಾಲೆಯನ್ನಾಗಿ ಪರಿವರ್ತಿಸಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆ ಮತ್ತು ಗ್ರಾಮ ಪಂಚಾಯತಿ ಪಿಡಿಓ ವಿರುದ್ಧ ಹೋರಾಟ ಆರಂಭಿಸುವುದಾಗಿ ತಾಲೂಕು ಹಿಂದೂ ಜಾಗರಣಾ ವೇದಿಕೆಯ ಕಾರ್ಯದರ್ಶಿ ಹರೀಶ್ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿಯಿಂದಲೇ ಟೆಕ್ಕಿ ಕಿಡ್ನಾಪ್- 5 ಕೋಟಿ ಡೀಲ್

ಬಾಬಯ್ಯನ ದೇವಸ್ತಾನದ ಹೆಸರಿನಲ್ಲಿ ಸ್ವತ್ತು ಇದ್ದು ಮಸೀದಿಯ ಎಲ್ಲಾ ಮುಖಂಡರುಗಳು ಸೇರಿ ನಮ್ಮ ಗುರುಗಳಿಗೆ ಮನೆಯನ್ನು ಮಾಡಿಕೊಟ್ಟಿದ್ದೇವೆ. ಶಾಲೆಯವರು ನಮ್ಮ ಸ್ವತ್ತಿನಲ್ಲಿ ಕಟ್ಟಡ ಕಟ್ಟಿದ್ದಾರೆ. ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ನಾವು ಶಾಲಾ ಕಟ್ಟಡವನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂದು ಮುಸ್ಲಿಂ ಸಮಾಜದ ಮುಖಂಡ ಬಸೀರ್ ತಿಳಿಸಿದ್ದಾರೆ.

ಇದೀಗ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗುತ್ತಿದಂತೆ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಶಾಲೆಯ ಕೊಠಡಿಯಲ್ಲಿ ಇದ್ದ ಸಾಮಾಗ್ರಿಗಳನ್ನು ತೆರವುಗೊಳಿಸಿ ಬೀಗ ಹಾಕಿದ್ದಾರೆ. ಈ ಕುರಿತು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement