ಕಲಬುರಗಿ: ಇತ್ತೀಚೆಗೆ ಬೆಂಗಳೂರಿನ ಮೇಟ್ರೋದಲ್ಲಿ ಹಿಂದಿ ನಾಮಫಲಕ ತೆಗಿಸಿ ಸಿಎಂ ಸಿದ್ದರಾಮಯ್ಯ ಅಪ್ಪಟ ಕನ್ನಡಿಗ ಎನಿಸಿಕೊಂಡಿದ್ದರು. ಆದರೆ ಇದೀಗ ಅವರದೇ ಪಕ್ಷದ ಮುಖಂಡ ಸಿಎಂಗೇ ಸೆಡ್ಡು ಹೊಡೆದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ.
ಕಲಬುರಗಿಯಲ್ಲಿ ಒಂದೆಡೆ ಬಹುಮನಿ ಉತ್ಸವ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇನ್ನೊಂದೆಡೆ ಅವರದೇ ಪಕ್ಷದ ಮುಖಂಡ ಹಾಗು ಎನ್‍ಇಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷ ಇಲಿಯಾಸ್ ಸೇಠ್ ಕಲಬುರಗಿಯ ಬಸ್ ನಿಲ್ದಾಣದ ಮೇಲೆ ಉರ್ದು ಭಾಷೆಯ ನಾಮಫಲಕ ಹಾಕಿಸಿದ್ದಾರೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾರ ಮತ ಬ್ಯಾಂಕ್ ಗಾಗಿ ಕೈ ಪಕ್ಷದ ನಾಯಕರು ಈ ನಾಮಫಲಕ ಹಾಕಿಸಿದ್ದಾರೆ ಎಂದು ಕಲಬುರಗಿ ಜಿಲ್ಲೆಯ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಕಲಬುರಗಿಯ ಬಸ್ ನಿಲ್ದಾಣದಲ್ಲಿ ಈ ಹಿಂದೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಾಮಫಲಕವಿತ್ತು. ಆದ್ರೆ ಯಾವಾಗ ಇಲಿಯಾಸ್ ಸೇಠ್ ಅವರನ್ನು ಈ ಮಂಡಳಿಯ ಅಧ್ಯಕ್ಷರಾಗಿ ಮಾಡಲಾಯಿತೋ ಆಗ ಅವರು ಅಧಿಕಾರಿಗಳ ವಿಶೇಷ ಸಭೆ ಕರೆದು ಬಸ್ ನಿಲ್ದಾಣದ ಮೇಲೆ ಉರ್ದು ನಾಮಫಲಕ ಹಾಕಿಸಿದ್ದಾರೆ. ಈ ಕುರಿತು ಈಶಾನ್ಯ ಸಾರಿಗೆ ಅಧಿಕಾರಿಗಳನ್ನು ಕೇಳಿದ್ರೆ ಮಾಧ್ಯಮದವರ ಕೈಗೆ ಆದೇಶ ಪ್ರತಿ ನೀಡಿ ನುಣಚಿಕೊಳ್ಳುತ್ತಿದ್ದಾರೆ.
ನಿರ್ದಿಷ್ಟ ಭಾಷಿಕರು ಹೆಚ್ಚು ಇರುವ ಕಡೆ ಆಯಾ ಭಾಷೆಯಲ್ಲಿ ನಾಮ ಫಲಕವನ್ನು ಬರೆಯಿಸುವುದು ಸೂಕ್ತವೆಂದು ಸದಸ್ಯರು ಅಭಿಪ್ರಾಯಪಟ್ಟರು. ಹೀಗಾಗಿ ಸಭೆಯಲ್ಲಿ ಇದಕ್ಕೆ ಒಮ್ಮತದ ಅಭಿಪ್ರಾಯ ಬಂದಿದ್ದು, ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಮೇಲೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಜೊತೆಗೆ ಉರ್ದು ನಾಮಫಲಕ ಸಹ ಹಾಕಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಹೇಳಲಾಗಿದೆ.