ನವದೆಹಲಿ: ನಗರ ನಕ್ಸಲರು ಗುಜರಾತ್‌ನಲ್ಲಿ ಸರ್ದಾರ್ ಸರೋವರ ಅಣೆಕಟ್ಟು ಯೋಜನೆಯ ವಿರುದ್ಧ ಪ್ರಚಾರ ನಡೆಸಿದ್ದರಿಂದ ನಿರ್ಮಾಣ ತಡವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತಿನ ನರ್ಮದಾ ಜಿಲ್ಲೆಯಲ್ಲಿ ಕೇಂದ್ರ ಪರಿಸರ ಸಚಿವಾಲಯದಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ ಅವರು ವಿವಿಧ ರಾಜ್ಯಗಳ ಪರಿಸರ ಸಚಿವರನ್ನು ಉದ್ದೇಶಿಸಿ ಮಾತನಾಡಿದರು.
Advertisement
ನಗರ ನಕ್ಸಲರು ಮತ್ತು ರಾಜಕೀಯ ಪಕ್ಷದ ಬೆಂಬಲ ಪಡೆದ ಅಭಿವೃದ್ಧಿ ವಿರೋಧಿಗಳು ಅಣೆಕಟ್ಟು ವಿರುದ್ಧ ಅಪಪ್ರಚಾರ ನಡೆಸಿದರು. ಅಣೆಕಟ್ಟು ನಿರ್ಮಾಣದಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಹಲವು ವರ್ಷಗಳ ಕಾಲ ಅಭಿಯಾನ ನಡೆಸಿದರು ಎಂದು ದೂಷಿಸಿದರು. ಇದನ್ನೂ ಓದಿ: ರಾಷ್ಟ್ರೀಯ ಮೇಯರ್ ಸಮ್ಮೇಳನ – ಉಡುಪಿ ನಗರಸಭೆಯನ್ನು ಹಾಡಿಹೊಗಳಿದ ಮೋದಿ
Advertisement
Advertisement
ಅಪಪ್ರಚಾರದಿಂದ ನಿರ್ಮಾಣ ಕಾರ್ಯ ವಿಳಂಬವಾಗಿ ಭಾರೀ ಪ್ರಮಾಣದ ಹಣ ವ್ಯರ್ಥವಾಯಿತು. ಅಣೆಕಟ್ಟು ಪೂರ್ಣಗೊಂಡ ಬಳಿಕ ಅವರ ಹೋರಾಟ ಎಷ್ಟು ಸಂಶಯಾಸ್ಪದವಾಗಿದೆ ಎಂಬುದನ್ನು ನೀವೇ ಚೆನ್ನಾಗಿ ನಿರ್ಣಯಿಸಬಹುದು ಎಂದು ಹೇಳಿದರು.
Advertisement
ಈ ವರ್ಷದ ಕೊನೆಯಲ್ಲಿ ಗುಜರಾತ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲೇ ಪ್ರಧಾನಿ ಮೋದಿ ಬಹಿರಂಗವಾಗಿ ನಗರ ನಕ್ಸಲರು ಎಂದು ಡ್ಯಾಂ ನಿರ್ಮಾಣದ ವಿರುದ್ಧ ಹೋರಾಟ ಮಾಡಿದವರನ್ನು ಸಂಬೋಧಿಸಿದ್ದಾರೆ.
1987ರಲ್ಲಿ ನರ್ಮದಾ ಜಲಾಶಯ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಈ ವೇಳೆ ಭಾರೀ ಹೋರಾಟಗಳು ನಡೆದ ಪರಿಣಾಮ 1995ರಲ್ಲಿ ಸುಪ್ರೀಂ ಕೋರ್ಟ್ 139 ಮೀಟರ್ ಎತ್ತರದ ಜಲಾಶಯ ನಿರ್ಮಾಣ ಕಾರ್ಯಕ್ಕೆ ತಡೆ ನೀಡಿತು. 2001ರಲ್ಲಿ ಸುಪ್ರೀಂ ಕೋರ್ಟ್ ಡ್ಯಾಂ ಎತ್ತರವನ್ನು 111 ಮೀಟರ್‌ಗೆ ನಿಗದಿ ಮಾಡಿತು. ಬಳಿಕ 2006ರಲ್ಲಿ ಕೋರ್ಟ್ 123 ಮೀಟರ್ ಎತ್ತರ ಏರಿಸಲು ಅನುಮತಿ ನೀಡಿತು. ಕೊನೆಗೆ 2017ರಲ್ಲಿ ಪೂರ್ಣ ಮಟ್ಟವಾದ 139 ಮೀಟರ್‌ಗೆ ಏರಿಸಲು ಅನುಮತಿ ಕೊಟ್ಟಿತು. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಣೆಕಟ್ಟು ಲೋಕಾರ್ಪಣೆ ಮಾಡಿದರು.
ಕಚ್ ಮತ್ತು ಸೌರಾಷ್ಟ್ರದ ಬರ ಪೀಡಿತ ಹೊಂದಿರುವ 1.9 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಜಲಾಶಯ ನಿರ್ಮಾಣ ಮಾಡಲಾಗಿದೆ. ಈ ಜುಲೈ ತಿಂಗಳಿನಲ್ಲಿ ನರ್ಮದಾ ಅಣೆಕಟ್ಟೆಯ ನೀರು ಕಾಲುವೆಯ ಮೂಲಕ 750 ಕಿ.ಮೀ. ದೂರದಲ್ಲಿರುವ ಕಚ್ ಜಿಲ್ಲೆಯ ಮಾಂಡ್ವಿ ತಾಲೂಕಿನ ಮೋಡ್ ಕುಬಾ ಗ್ರಾಮವನ್ನು ತಲುಪಿತ್ತು.