ದಕ್ಷಿಣಕನ್ನಡ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇಂದು ಧರ್ಮಸ್ಥಳಕ್ಕೆ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ ಖಾದರ್ ಭೇಟಿ ನೀಡಿದ್ದಾರೆ.
ದೇವಸ್ಥಾನದ ಒಳಗೆ ಹೋಗದೆ ಹುಂಡಿಗೆ ಕಾಣಿಕೆ ಹಾಕಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಖಾದರ್ ಅವರನ್ನು ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿ ಗೌರವಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಸಚಿವರ ಜೊತೆಗಿದ್ದರು.
ನಂತರ ಧರ್ಮಸ್ಥಳ ಕ್ಷೇತ್ರದ ಸಮೀಪದಲ್ಲಿರುವ ಕನ್ಯಾಡಿ ಕ್ಷೇತಕ್ಕೆ ಭೇಟಿ ನೀಡಿದ ಸಚಿವರು ಶ್ರೀರಾಮನಿಗೆ ನಮಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ರಾಜ್ಯದ ಜನ ಯಾವುದೇ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಟ್ಟಿಲ್ಲದ ಕಾರಣ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಂದಿನ 5 ವರ್ಷಗಳ ಕಾಲ ಜನ ಸಾಮಾನ್ಯರ ಕೆಲಸ ಮತ್ತು ರಾಜ್ಯದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು.
ಸರ್ಕಾರದಲ್ಲಿ ಯು.ಟಿ ಖಾದರ್ ಅವರಿಗೆ ನಗರಾಭಿವೃದ್ಧಿ ಹಾಗೂ ವಸತಿ ಖಾತೆಯನ್ನು ನೀಡಲಾಗಿದೆ. ಈ ಖಾತೆಗಳಿಗೆ ಸಂಬಂಧಿಸಿದಂತೆ ಜನಸಾಮನ್ಯರ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.