ಚಂಡೀಗಢ: ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ವಿದ್ಯಾರ್ಥಿನಿಯೊಬ್ಬಳು ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಜಿಂದ್ ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 17 ವರ್ಷದ ಅಂಜಲಿ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ 11ನೇ ತರಗತಿಯಲ್ಲಿ ಓದುತ್ತಿದ್ದಳು. ಇಂದು ಬೆಳಗ್ಗೆ ಅಂಜಲಿ ತಂದೆ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದರು. ತಂದೆ ಕೆಲಸಕ್ಕೆ ಹೋಗುತ್ತಿದ್ದಂತೆ ಅಂಜಲಿ ಬಾತ್ ರೂಮಿಗೆ ತೆರಳಿ ಲಾಕ್ ಮಾಡಿಕೊಂಡ ತಂದೆಯ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾಳೆ. ನಂತರ ಕುಟುಂಬದವರು ತಂದೆಗೆ ಮಾಹಿತಿ ತಿಳಿಸಿದ್ದಾರೆ.
ಕೂಡಲೇ ತಂದೆ ಮನೆಗೆ ಬಂದು ಬಾತ್ ರೂಮಿನ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಅಂಜಲಿ ತಲೆಗೆ ಗುಂಡೇಟು ಬಿದ್ದು ಮೃತಪಟ್ಟಿದ್ದಾಳೆ. ಭಾನುವಾರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಅಂಜಲಿ ಉತ್ತಮ ಅಂಕ ಪಡೆದುಕೊಂಡಿದ್ದಳು. ಆದರೆ ಕ್ಲಾಸ್ ಗೆ ಟಾಪ್ ಬರಲಿಲ್ಲ ಎಂದು ಆಕೆ ಮನನೊಂದಿದ್ದಳು ಎನ್ನಲಾಗಿದ್ದು, ಇದರಿಂದ ತಂದೆಯ ಲೈಸನ್ಸ್ ಹೊಂದಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪಿಲ್ಲುಖೆರಾದಲ್ಲಿರೋ ಖಾಸಗಿ ಶಾಲೆಯಲ್ಲಿ ಅಂಜಲಿ ಓದುತ್ತಿದ್ದು, ತಂದೆ ಸಿವಾಹ್ ಗ್ರಾಮದ ಸರ್‍ಪಂಚ್ ಆಗಿದ್ದಾರೆ. ಸದ್ಯಕ್ಕೆ ಅಂಜಲಿ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.