Maharashtra: ಪ್ರೊಬೇಷನರಿ IAS ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಎಫ್‌ಐಆರ್‌!

Public TV
1 Min Read
Puja Khedkar

ಮುಂಬೈ: ವಿಶೇಷಚೇತನ ಹಾಗೂ ಒಬಿಸಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಮೇಲೆ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ (Puja Khedkar) ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (UPSC) ಎಫ್‌ಐಆರ್‌ ದಾಖಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Puja Khedkar 3

ತಮ್ಮ ಉದ್ಯೋಗ ಭದ್ರತೆಗಾಗಿ ಪೂಜಾ ಖೇಡ್ಕರ್‌ ನಕಲಿ ದಾಖಲೆ, ಪ್ರಮಾಣ ಪತ್ರಗಳನ್ನ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಖಾಸಗಿ ಆಡಿ ಕಾರಿಗೆ ರೆಡ್‌ಲೈಟ್‌ ಮತ್ತು ಮಹಾರಾಷ್ಟ್ರ ಸರ್ಕಾರದ (Maharashtra Government) ಲಾಂಛನ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಎಲ್ಲ ಕಾರಣಗಳಿಂದಾಗಿ ಮಹಾರಾಷ್ಟ್ರ ಸರ್ಕಾರ ಅವರ ತರಬೇತಿಯನ್ನು ತಡೆಹಿಡಿದಿತ್ತು. ವಿಚಾರಣೆಗಾಗಿ ಮಸ್ಸೂರಿಯಲ್ಲಿರುವ ಲಾಲ್‌ ಬಹದ್ದೂರ್‌ ಶಾಸ್ತ್ರೀ ನ್ಯಾಷನಲ್‌ ಅಕಾಡೆಮಿ ಆಫ್‌ ಅಡ್ಮಿನಿಸ್ಟ್ರೇಷನ್‌ಗೆ ಬರುವಂತೆ ಸೂಚಿಸಿತ್ತು. ವಿಚಾರಣೆ ಬಳಿಕ ಗುರುವಾರ (ಜು.18) ಶೋಕಾಸ್‌ ನೋಟಿಸ್‌ ಜಾರಿಗೊಳಿಸಿದ್ದ ಯುಪಿಎಸ್‌ಸಿ, ಶುಕ್ರವಾರ (ಇಂದು) ಎಫ್‌ಐಆರ್‌ ದಾಖಲಿಸಿದೆ.

image 1

ಪೂಜಾ ಮೇಲಿನ ಆರೋಪ ಏನು?
2023ನೇ ಸಾಲಿನ ಐಎಎಸ್‌ ಅಧಿಕಾರಿಯಾಗಿರುವ ಪೂಜಾ ಖೇಡ್ಕರ್‌ ಅವರು ವಾಶೀಂ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿದ್ದರು. ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ತಾವು ಭಾಗಶಃ ಅಂಗವಿಕಲತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ಅಂಗವೈಕಲ್ಯ ಕೋಟಾ ಬಳಸಿಕೊಂಡಿದ್ದರು. ಅಲ್ಲದೇ ಹಿಂದುಳಿದ ವರ್ಗಗಳ ಅಡಿಯಲ್ಲಿ ಮೀಸಲಾತಿ ಕೋಟಾ ದುರ್ಬಳಕೆ ಮಾಡಿಕೊಂಡಿದ್ದಾರೆ. ಜಾತಿ ಮತ್ತು ವೈದ್ಯಕೀಯ ಪ್ರಮಾಣ ಪತ್ರಗಳನ್ನು ನಕಲು ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಮುನ್ನವೇ ಸವಲತ್ತುಗಳಿಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಅವರ ವಿರುದ್ಧ ಇದೆ ಎಂದು ಸಂಬಂಧಪಟ್ಟ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ತಾಯಿ ಅರೆಸ್ಟ್‌ ಬೆನ್ನಲ್ಲೇ ತಂದೆ ನಿರೀಕ್ಷಣಾ ಜಾಮೀನು:
ರೈತರೊಬ್ಬರಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಪೂಜಾ ಖೇಡ್ಕರ್‌ ಅವರ ತಾಯಿ ಮನೋರಮಾ ಖೇಡ್ಕರ್‌ ಅವರನ್ನ ಪುಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಬೆನ್ನಲ್ಲೇ ಪೂಜಾ ತಂದೆ ಸೆಷನ್ಸ್ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

Share This Article