ಬೆಂಗಳೂರು: ಜಾತಿ ಗಣತಿ (Caste Census) ಬಗ್ಗೆ ನೀಡಲಾಗಿರುವ ವರದಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗರು ಶಾಸಕರು ಬಲವಾಗಿ ವಿರೋಧಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಒಕ್ಕಲಿಗ, ಲಿಂಗಾಯತ ಸಮುದಾಯದ ಸಚಿವರ ವಿರೋಧ ಹಿನ್ನಲೆಯಲ್ಲಿ ಇಂದಿನ ಕ್ಯಾಬಿನೆಟ್‌ನಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ.
ಒಕ್ಕಲಿಗ ಸಚಿವರು ಈಗಿರುವ ಅಂಕಿ ಸಂಖ್ಯೆ ಒಪ್ಪಲು ಸಾಧ್ಯವಿಲ್ಲ. ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್ ಗಳಲ್ಲಿ ಗುರುತಿಸಲಾಗಿದೆ. ಎಲ್ಲಾ ಕ್ಲಾಸ್ ಗಳಲ್ಲಿ ಬೇರೆ ಬೇರೆ ಅಗಿ ಗುರುತಿಸಿರುವ ಸಮುದಾಯವನ್ನು ಒಟ್ಟಿಗೆ ಸೇರಿಸಿ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ಮರು ಸಮೀಕ್ಷೆ ಮಾಡುವುದು ಅನಿವಾರ್ಯ. ಇದು ನಮ್ಮ ಸಮುದಾಯದ ನಿಲುವು ಎಂದು ಕ್ಯಾಬಿನೆಟ್ ಮುಂದೆ ಹೇಳಿದ್ದಾರೆ.
ಲಿಂಗಾಯತ ಸಮುದಾಯದ ಸಚಿವರು ಕೆಲವು ದಾಖಲೆಯನ್ನು ಮುಂದಿಟ್ಟು ವಿರೋಧಿಸಿದ್ದಾರೆ. ನಮ್ಮ ಸಮುದಾಯ ಸಂಖ್ಯೆ 11% ಎಂದು ವರದಿ ಹೇಳುತ್ತಿದೆ. ಆದರೆ 1990ರ ಚಿನ್ನಪ್ಪ ರೆಡ್ಡಿ ಆಯೋಗವೇ ನಮ್ಮ ಸಮುದಾಯ 17% ಎಂದು ವರದಿ ಕೊಟ್ಟಿದೆ. ನಮ್ಮ ಅಂದಾಜಿನ ಪ್ರಕಾರ ನಮ್ಮ ಎಲ್ಲಾ ಉಪ ಜಾತಿಗಳು ಸೇರಿ ರಾಜ್ಯದಲ್ಲಿ 22% ಇದ್ದೇವೆ. ಆದರೆ ಈ ವರದಿ ಕೇವಲ 11% ಕೊಟ್ಟಿದ್ದನ್ನು ನಮ್ಮ ಸಮುದಾಯ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಎಸ್‌ಎಸ್ ಮಲ್ಲಿಕಾರ್ಜುನ ಅವರು ಜಾತಿ ಜನಗಣತಿಯನ್ನು ಏರು ಧ್ವನಿಯಲ್ಲಿ ತೀವ್ರವಾಗಿ ವಿರೋಧಿಸಿದ್ದಾರೆ. ಮುಸ್ಲಿಮರಲ್ಲೂ ಹಲವಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಎಸ್ ಎಸ್ ಮಲ್ಲಿಕಾರ್ಜುನ ಪ್ರಶ್ನಿಸಿ ಕಿಡಿಕಾರಿದ್ದಾರೆ. ಈ ವೇಳೆ ಯಾವ ವರ್ಗಕ್ಕೆ ಅನ್ಯಾಯ ಆಗಿದೆಯೋ ಅದನ್ನು ಸೇರಿಸಲು ಅವಕಾಶ ಇದೆ ಎಂದು ಹೇಳುವ ಮೂಲಕ ಸಂತೋಷ್ ಲಾಡ್ ಸಚಿವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.
ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಸಂಪುಟ ಸಭೆ, ಒಂದು ಗಂಟೆ ತಡವಾಗಿ 5 ಗಂಟೆಗೆ ಆರಂಭವಾಗಿತ್ತು. ಇಬ್ಬರು ಸಚಿವರನ್ನು ಹೊರತುಪಡಿಸಿದರೆ ಎಲ್ಲಾ 31 ಸಚಿವರು ಸಭೆಗೆ ಹಾಜರಾಗಿದ್ದರು. ಸಿಎಂ ಅನುಮತಿ ಪಡೆದು ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಕೆ. ವೆಂಕಟೇಶ್ ಗೈರಾಗಿದ್ದು ವಿಶೇಷವಾಗಿತ್ತು.
ಸಂಪುಟ ಸಭೆಗೂ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಒಕ್ಕಲಿಗ ಸಚಿವರೊಂದಿಗೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.