ಬೆಂಗಳೂರು: ಬಸ್ ಮತ್ತು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಗ್ಯಾಂಗನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧನದ ನಂತರ ಆರೋಪಿಗಳ ಮೇಲೆ ಇದ್ದ 27 ಪ್ರಕರಣಗಳು ಬೆಳಕಿಗೆ ಬಂದಿವೆ.
ಇಬ್ಬರು ಕಳ್ಳಿಯರು ಸೇರಿ ಆರು ಮಂದಿ ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್, ವರಲಕ್ಷ್ಮಿ ಅಲಿಯಾಸ್ ಲಕ್ಷ್ಮಿ, ಮನುಕುಮಾರ್, ಭಾಗ್ಯ ಅಲಿಯಾಸ್ ಸುನಾಮಿ, ಮಂಜ ಅಲಿಯಾಸ್ ಪಾನಿಪುರಿ ಮಂಜ ಮತ್ತು ಅಮ್ಜದ್ ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳು ಮೂಲತ: ಆಂಧ್ರ ಪ್ರದೇಶದವರಾಗಿದ್ದು, ಬೆಂಗಳೂರಿನಲ್ಲಿ ಅಲೆಮಾರಿ ಜೀವನ ನಡೆಸುತ್ತಿದ್ದರು. ಆರೋಪಿಗಳ ಬಂಧನದಿಂದ ಬರೋಬ್ಬರಿ 27 ಪ್ರಕರಣಗಳು ಪತ್ತೆಯಾಗಿದ್ದು, ಉಪ್ಪಾರಪೇಟೆ, ಕಲಾಸಿಪಾಳ್ಯ, ಕಾಟನ್ ಪೇಟೆ, ಸಿಟಿ ಮಾರ್ಕೆಟ್ ಸೇರಿದಂತೆ 11 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ವೆಂಕಟೇಶ್ ಹಾಗೂ ವರಲಕ್ಷ್ಮಿ ದಂಪತಿಯೇ ಈ ಖತರ್ನಾಕ್ ಗ್ಯಾಂಗಿನ ಮಾಸ್ಟರ್ ಮೈಂಡ್ ಆಗಿದ್ದು, ಒಂದೇ ಕುಟುಂಬದ ಐವರ ಖತರ್ನಾಕ್ ಗ್ಯಾಂಗ್ ಈ ಕೃತ್ಯವನ್ನು ಮಾಡುತ್ತಿದ್ದರು. ಇವರು ಬಸ್ಸುಗಳನ್ನು ಹತ್ತಿ ಅಮಾಯಕರಂತೆ ವರ್ತಿಸಿ ಕ್ಷಣಾರ್ಧದಲ್ಲಿ ಬ್ಯಾಗ್ ಗಳನ್ನು ಎಗರಿಸುತ್ತಿದ್ದರು. ಈಗ ಉಪ್ಪಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತ ಆರೋಪಿಗಳಿಂದ ಸುಮಾರು 37 ಲಕ್ಷ ರೂ ಹಣಕ್ಕಿಂತ ಹೆಚ್ಚು ಬೆಲೆ ಬಾಳುವ ಚಿನ್ನಾಭರಣ ವಶವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv