– ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು: ಅಂಗನವಾಡಿ ಕೇಂದ್ರಗಳನ್ನು (Anganwadi Centres) ಮಾಂಟೆಸ್ಸರಿಗಳನ್ನಾಗಿ (Montessori) ಮೇಲ್ದರ್ಜೆಗೆ ಏರಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಚಿವರ ಜತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭಕ್ಕೆ ಅಂಗನವಾಡಿ ಕಾರ್ಯಕರ್ತೆಯರು ವಿರೋಧ ಮಾಡುತ್ತಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆ, ನಮ್ಮ ಇಲಾಖೆ ಜತೆ ಸಿಎಂ ಸಭೆ ಮಾಡಿದರು. ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭ ಮಾಡಲಾಗ್ತಿದೆ. ಇದು ಅಂಗನವಾಡಿ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಜೊತೆ ಸಭೆ ಮಾಡಿದ್ದು ಈಗ ಆದೇಶ ಹೊರಡಿಸಿರುವ ಶಾಲೆಗಳಲ್ಲಿ ಬಿಟ್ಟು ಹೊಸದಾಗಿ LKG, UKG ಪ್ರಾರಂಭ ಮಾಡದಂತೆ ಮಾತುಕತೆ ನಡೆದಿದೆ. ಮುಂದಿನ ಪ್ರಕ್ರಿಯೆ ಮಾಡಲು ತಜ್ಞರ ಸಮಿತಿ ನೇಮಕ ಮಾಡಲಾಗುತ್ತಿದೆ ಎಂದರು.
ಅಂಗನವಾಡಿಗಳನ್ನು ಅಪ್ ಗ್ರೇಡ್ ಮಾಡಲು ಸಿಎಂ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಎಂ ಇದಕ್ಕೆ ಒಪ್ಪಿದ್ದಾರೆ. ಅಂಗನವಾಡಿಗಳನ್ನ ಇನ್ನು ಮುಂದೆ ಸರ್ಕಾರಿ ಮಾಂಟೆಸ್ಸರಿಗಳಾಗಿ ಅಪ್ ಗ್ರೇಡ್ ಮಾಡಲಾಗುತ್ತದೆ. ಇಲ್ಲಿ LKG, UKG ತರಗತಿಗಳನ್ನು ಕನ್ನಡ, ಇಂಗ್ಲಿಷ್ ಮಾಧ್ಯಮಗಳಲ್ಲಿ ಪ್ರಾರಂಭ ಮಾಡಲು ತೀರ್ಮಾನ ಮಾಡಲಾಗಿದೆ. ಮೊದಲ ಹಂತದಲ್ಲಿ 9 ಸಾವಿರ ಅಂಗನವಾಡಿಗಳನ್ನ ಮಾಂಟೆಸ್ಸರಿಗಳಾಗಿ ಅಪ್ ಗ್ರೇಡ್ ಮಾಡಲು ತೀರ್ಮಾನ ಮಾಡಲಾಗಿದೆ. ಮಾಂಟೆಸ್ಸರಿಗಳಲ್ಲಿ ಸಮವಸ್ತ್ರ, ಶೂ, ಬ್ಯಾಗ್‌ಗಳನ್ನು ನೀಡಲಾಗುತ್ತದೆ. ಎಲ್ಲಾ ಸಿದ್ದತೆ ಮಾಡಿಕೊಂಡು ಆರ್ಥಿಕ ಇಲಾಖೆ ಜೊತೆ ಮಾತನಾಡಲಾಗುವುದು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಜೊತೆ ಈಗಾಗಲೇ ಮಾತುಕತೆ ನಡೆದಿದೆ. ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭ ಮಾಡಿದರೂ ಅಂಗನವಾಡಿ ಕಾರ್ಯಕರ್ತೆಯರನ್ನ ಕೆಲಸದಿಂದ ತೆಗೆಯುವುದಿಲ್ಲ. ಅಂಗನವಾಡಿಗಳನ್ನ ರೀ ಡೆಸಿಗ್ನೇಷನ್ ಮಾಡೋದಾಗಿ ಹೇಳಿದ್ದು ಅದಕ್ಕೂ ಅಂಗನವಾಡಿ ಕಾರ್ಯಕರ್ತರು ಒಪ್ಪಿಕೊಂಡಿದ್ದಾರೆ. ಅಂಗನವಾಡಿಗಳನ್ನ ಅಪ್ ಗ್ರೇಡ್ ಮಾಡುವ ಬೇಡಿಕೆ ಇತ್ತು. ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.