ಬೆಂಗಳೂರು: ನಟ, ರಾಜಕಾರಣಿ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದಿಂದ (ಯುಪಿಪಿ) ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಉಪೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಇದಕ್ಕೂ ಯುಪಿಪಿ ಅಭ್ಯರ್ಥಿಗಳನ್ನು ವಿಭಿನ್ನವಾಗಿ ಪರಿಚಯ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿ ತಿಳಿಸುವ ಸಣ್ಣ ಗೀತನಾಟಕದ ಮೂಲಕ ಉಪೇಂದ್ರ ತಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ಪರಿಚಯಿಸಿದರು.
Advertisement
Advertisement
ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಯುಪಿಪಿಯಿಂದ 14 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉಪೇಂದ್ರ ಅವರು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸುರೇಶ್ ಕುಂದರ್, ಹಾಸನದಿಂದ ಚಂದ್ರೇಗೌಡ ಎಚ್.ಎಂ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ವಿಜಯ್ ಶ್ರೀನಿವಾಸ್, ಚಿತ್ರದುರ್ಗದಿಂದ ದೇವೇಂದ್ರಪ್ಪ ಕಣಕ್ಕೆ ಇಳಿದಿದ್ದಾರೆ.
Advertisement
ತುಮಕೂರು ಕ್ಷೇತ್ರದಿಂದ ಛಾಯಾ ರಾಜಾಶಂಕರ್ ಸ್ಪರ್ಧಿಸಿದರೆ, ಮಂಡ್ಯದಿಂದ ದಿವಾಕರ್ ಸಿ.ಪಿ.ಗೌಡ, ಮೈಸೂರು ಕ್ಷೇತ್ರದಿಂದ ಆಶಾರಾಣಿ ವಿ, ಚಾಮರಾಜನಗರದಿಂದ ನಾಗರಾಜು.ಎಂ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇತ್ತ ಬೆಂಗಳೂರು ಗ್ರಾಮಾಂತರದಿಂದ ಮಂಜುನಾಥ.ಎಂ, ಬೆಂಗಳೂರು ಉತ್ತರದಿಂದ ಸಂತೋಷ್.ಎಂ, ಬೆಂಗಳೂರು ಕೇಂದ್ರದಿಂದ ಶ್ರೀದೇವಿ ಮೆಳ್ಳೇಗಟ್ಟಿ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಹೊರಾತ್ರ, ಚಿಕ್ಕಬಳ್ಳಾಪುರನಿಂದ ಮುನಿರಾಜು.ಜಿ, ಕೋಲಾರದಿಂದ ರಾಮಾಂಜಿನಪ್ಪ.ಆರ್ ಸ್ಪರ್ಧಿಸುತ್ತಿದ್ದಾರೆ.
Advertisement
ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುವ ವಿಚಾರವಾಗಿ ಮಾತನಾಡಿದ ಉಪೇಂದ್ರ ಅವರು, ಈ ಚುನಾವಣೆಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ಕೆಲಸಗಳಿದ್ದವು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ಯೋಚಿಸುತ್ತಿರುವೆ ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯನ್ನು ನಾನು ನಂಬುತ್ತೇನೆ. ಪ್ರಣಾಳಿಕೆಯು ಚುನಾವಣಾ ಆಯೋಗದಿಂದ ರಿಜಿಸ್ಟರ್ ಆಗಬೇಕು. ಅದಕ್ಕೆ ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬೇಕು. ಪ್ರಣಾಳಿಕೆಯನ್ನು ಎಲ್ಲರೂ ಕೊಡುತ್ತಾರೆ. ಆದರೆ ಎಷ್ಟು ಭರವಸೆ ಈಡೇರಿಸಿದ್ದಾರೆ ಅಂತ ಯಾರಾದ್ರೂ ಪರಿಶೀಲನೆ ಮಾಡುತ್ತಾರಾ? ನನ್ನ ಥಿಯರಿಗಳು ಖಂಡಿತಾ ಜನರಿಗೆ ಅರ್ಥ ಆಗುತ್ತವೆ ಎಂದು ಹೇಳಿದರು.