Connect with us

Bengaluru City

ಉಪ್ಪಿ ಶಶಾಂಕ್ ಕಾಂಬಿನೇಷನ್ ಸಿನಿಮಾ ಶುರುವಾಯ್ತು!

Published

on

ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಶಶಾಂಕ್ ಕಾಂಬಿನೇಷನ್ನಿನಲ್ಲೊಂದು ಚಿತ್ರ ಬರಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಹರಿದಾಡುತ್ತಿತ್ತು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿಯೇ ಈ ಚಿತ್ರದ ಮುಹೂರ್ತ ಸಮಾರಂಭವೂ ನೆರವೇರಿದೆ. ಈ ಮೂಲಕ ಈ ಸಿನಿಮಾ ಬಗೆಗಿನ ಕೆಲವೇ ಕೆಲ ಮಾಹಿತಿಗಳೂ ಜಾಹೀರಾಗಿವೆ.

ರಿಯಲ್ ಸ್ಟಾರ್ ಉಪೇಂದ್ರ ಐ ಲವ್ ಯೂ ಚಿತ್ರದ ಯಶಸ್ಸಿನ ನಂತರದಲ್ಲಿ ಹೊಸದಾಗಿ ಒಪ್ಪಿಕೊಂಡಿರೋ ಮೊದಲ ಚಿತ್ರವಿದು. ಇದರ ಮುಹೂರ್ತ ಮತ್ತು ಸ್ಕ್ರಿಪ್ಟ್ ಪೂಜೆಯನ್ನು ಶಶಾಂಕ್ ನಡೆಸಿದ್ದಾರೆ. ಇದೇ ಹೊತ್ತಿನಲ್ಲಿ ಕೆಲವೇ ಕೆಲ ಅಂಶಗಳನ್ನು ಮಾತ್ರವೇ ಶಶಾಂಕ್ ಬಿಟ್ಟುಕೊಟ್ಟಿದ್ದಾರೆ. ಅದರನ್ವಯ ಈ ಸಿನಿಮಾದಲ್ಲಿ ಉಪ್ಪಿಗೆ ಇಬ್ಬರು ನಾಯಕಿಯರು ಇರಲಿದ್ದಾರೆಂಬುದು ಪಕ್ಕಾ ಆಗಿದೆ. ನಿಶ್ವಿಕಾ ನಾಯ್ಡು ಮತ್ತು ಬೀರ್‍ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರಾಗಿ ನಿಕ್ಕಿಯಾಗಿದ್ದಾರೆ.

ಇದರ ಕಥೆ ಕೂಡಾ ವಾಸ್ತವಿಕ ನೆಲೆಗಟ್ಟಿನಲ್ಲಿಯೇ ರೂಪುಗೊಂಡಿದೆಯಂತೆ. ಪ್ರಸ್ತುತ ರಾಜಕೀಯ ಸ್ಥಿತಿಗತಿಗಳನ್ನು ಆಧಾರವಾಗಿಟ್ಟುಕೊಂಡು ಈ ಕಥೆಯನ್ನು ಶಶಾಂಕ್ ಬರೆದಿದ್ದಾರಂತೆ. ಈ ವಿಚಾರವೇ ಸದರಿ ಚಿತ್ರದತ್ತ ಜನ ಕುತೂಹಲದಿಂದ ನೋಡುವಂತಾಗಿದೆ. ಯಾಕೆಂದರೆ ಉಪ್ಪಿ ರಾಜಕೀಯದ ಬಗ್ಗೆ ತಮ್ಮದೇ ಆದ ಸ್ಪಷ್ಟವಾದ ನಿಲುವುಗಳನ್ನು, ವಿಚಾರಧಾರೆಗಳನ್ನು ಹೊಂದಿರುವವರು. ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಸರಿಮಾಡಬೇಕೆಂಬ ಕನಸು ಮತ್ತು ಅದಕ್ಕೆ ಬೇಕಾದ ರೂಪುರೇಷೆಗಳನ್ನೂ ಹೊಂದಿರುವವರು. ಅವರು ಈ ಕಥೆಯನ್ನು ಒಪ್ಪಿಕೊಂಡಿದ್ದಾರೆಂದ ಮೇಲೆ ಅದರಲ್ಲಿ ವಿಶೇಷವಾದುದೇನೋ ಇದೆ ಎಂದೇ ಅರ್ಥ.

ಇಂಥಾ ಅಪರೂಪದ ರಾಜಕೀಯ ಕಥೆಯಾಧಾರಿತವಾದ ಈ ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಸದ್ಯ ಚಾಲ್ತಿಯಲ್ಲಿದೆ. ಉಪೇಂದ್ರ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಇದರ ಫಸ್ಟ್ ಲುಕ್ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಮಾಡಲು ಶಶಾಂಕ್ ಯೋಜನೆ ಹಾಕಿಕೊಂಡಿದ್ದಾರೆ. ಆದ್ದರಿಂದ ಸೆಪ್ಟೆಂಬರ್ 18ರತ್ತ ಉಪ್ಪಿ ಅಭಿಮಾನಿಗಳೆಲ್ಲ ಕಣ್ಣಾಗುತ್ತಾ ಈ ಸಿನಿಮಾ ಬಗ್ಗೆ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳುವ ಉತ್ಸಾಹದಿಂದಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in