ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಐ ಲವ್ ಯೂ ಚಿತ್ರದ ದೊಡ್ಡ ಗೆಲುವಿನ ಪ್ರಭೆಯಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇದೀಗ ಕರ್ವ ಎಂಬ ಹೊಸ ಅಲೆಯ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದ ನವನೀತ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸಲು ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಥೆ ಕೇಳಿ ಖುಷ್ ಆಗಿರೋ ಉಪ್ಪಿ ತಕ್ಷಣವೇ ಒಪ್ಪಿಗೆ ಸೂಚಿಸಿರೋ ಈ ಸಿನಿಮಾ ತರುಣ್ ಶಿವಪ್ಪ ನಿರ್ಮಾಣದಲ್ಲಿ ಮೂಡಿ ಬರಲಿದೆ.
ಕರ್ವ ಚಿತ್ರದ ಹೊಸತನದ ಕಥೆ, ನಿರೂಪಣೆಯ ಮೂಲಕ ಚೊಚ್ಚಲ ಪ್ರಯತ್ನದಲ್ಲಿಯೇ ಹಿಟ್ ಸಿನಿಮಾ ಕೊಟ್ಟಿದ್ದವರು ನವನೀತ್. ಅವರು ಬಲು ಪ್ರೀತಿಯಿಂದ ಇದೀಗ ಉಪೇಂದ್ರ ಅವರಿಗಾಗಿ ಒಂದು ಅಚ್ಚುಕಟ್ಟಾದ ಕಥೆಯನ್ನು ಸಿದ್ಧಗೊಳಿಸಿದ್ದಾರೆ. ಈ ಹಿಂದಿನ ಚಿತ್ರಕ್ಕಿಂತಲೂ ಹೊಸ ಜಾನರಿನ ಮೂಲಕ ನವನೀತ್ ಈ ಚಿತ್ರವನ್ನು ರೂಪಿಸಲು ಮುಂದಾಗಿದ್ದಾರೆ. ಈಗಾಗಲೇ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿರೋ ತರುಣ್ ಶಿವಪ್ಪ ಕಥೆ ಹೊಸತನದಿಂದ ಕೂಡಿದೆ, ಚೆನ್ನಾಗಿದೆ ಎಂಬ ಕಾರಣದಿಂದಲೇ ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರಂತೆ. ಅಂದಹಾಗೆ ಇದು ತರುಣ್ ಶಿವಪ್ಪ ನಿರ್ಮಾಣದ ಐದನೇ ಸಿನಿಮಾ.
ಇದೀಗ ತರುಣ್ ಶಿವಪ್ಪ ಚಿರಂಜೀವಿ ಸರ್ಜಾ ನಟನೆಯ ಖಾಕಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದು ಬಿಡುಗಡೆಯಾಗೋ ಘಳಿಗೆಯಲ್ಲಿ ಅದ್ಧೂರಿಯಾಗಿ ಈ ಸಿನಿಮಾಗೆ ಚಾಲನೆ ನೀಡಲೂ ನಿರ್ಧರಿಸಿದ್ದಾರೆ. ಈ ಕಥೆಯನ್ನು ಕೇಳಿ ಉಪೇಂದ್ರ ಕೂಡಾ ಖುಷಿಗೊಂಡಿದ್ದಾರೆ. ಯುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹಿಸುವ ಸ್ವಭಾವದ ಉಪ್ಪಿ ಈ ಕಥೆನ್ನು ಕೇಳಿ ಥ್ರಿಲ್ ಆಗಿದ್ದಾರಂತೆ. ಇದೇ ತಿಂಗಳ ಹದಿನೆಂಟರಂದು ಉಪ್ಪಿ ಹುಟ್ಟುಹಬ್ಬವಿದೆ. ಆ ಸಂದರ್ಭದಲ್ಲಿಯೇ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಅನಾವರಣಗೊಳಿಸಲು ನಿರ್ಮಾಪಕ ತರುಣ್ ಶಿವಪ್ಪ ತೀರ್ಮಾನಿಸಿದ್ದಾರೆ.