ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸಂಸದ ಶಿವರಾಮೇಗೌಡ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯ ಬಿಸಿ ನಟ, ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ತಟ್ಟಿತು.
ಹೌದು. ಮದ್ದೂರು-ಮಳವಳ್ಳಿ ಹೆದ್ದಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾಗ ನಟ, ರಿಯಲ್ ಸ್ಟಾರ್ ಉಪೇಂದ್ರ ಅದೇ ಮಾರ್ಗವಾಗಿ ಸಾಗುತ್ತಿದ್ದರು. ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದರಿಂದಾಗಿ ಉಪ್ಪಿ ಟ್ರಾಫಿಕ್ ನಲ್ಲಿ ಸಿಲುಕಿದ್ದರು. ಈ ವೇಳೆ ಅವಹೇಳನಕಾರಿ ಟೀಕೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಆದರೆ ಉಪೇಂದ್ರ ಅವರು ಯಾರ ಪರ, ವಿರುದ್ಧ ಮಾತನಾಡದೇ `ಬುದ್ಧಿವಂತ’ನಂತೆ ಜಾರಿಕೊಂಡಿದ್ದಾರೆ.
ರಾಜರ (ರಾಜಕಾರಣಿಗಳ) ಹೊಡೆದಾಟ, ಬೈದಾಟವನ್ನು ಇಷ್ಟು ವರ್ಷ ನೋಡಿ ಸಾಕಾಗಿದೆ. ನಾನು ನಿಮಗೆ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರನ್ನು ಕೊಡ್ತೀನಿ. ರಾಜರು ಬೇಕಾ? ಅಥವಾ ಸಂಬಳಕ್ಕೆ ಕೆಲಸ ಮಾಡೋ ಕೆಲಸಗಾರರು ಬೇಕಾ ನೀವೇ ತೀರ್ಮಾನಿಸಿ ಎಂದು ಎಂದು ಹೇಳುವ ಮೂಲಕ ಜಾರಿಕೊಂಡರು.
ಪ್ರತಿಭಟನಾಕಾರರ ಆಕ್ರೋಶ:
ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆಂಬ ಕಾರಣಕ್ಕೆ ಜೆಡಿಎಸ್ ಮುಖಂಡರು ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ. ಅಂಬರೀಶ್ ಬದುಕಿದ್ದಾಗ ಕಾಲಿಗೆ ಬೀಳುತ್ತಿದ್ದ ಸಂಸದ ಶಿವರಾಮೇಗೌಡ, ಈಗ ಅಂಬಿ ಕುಟುಂಬದ ವಿರುದ್ಧ ಮಾತನಾಡುತ್ತಿದ್ದಾರೆ. ಸುಮಲತಾ ಮಂಡ್ಯದ ಸೊಸೆ, ನಮ್ಮ ಮನೆ ಮಗಳಾಗಿದ್ದಾರೆ. ಇದಕ್ಕೆ ಚುನಾವಣೆಯಲ್ಲಿ ಮಂಡ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಶಿವರಾಮೇಗೌಡರ ವಿರುದ್ಧ ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಿವರಾಮೇಗೌಡ ಹೇಳಿದ್ದೇನು?:
ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ಅಂಬರೀಶ್ ಶವ ಸಂಸ್ಕಾರಕ್ಕೆ ಸೇರಿದ ಜನಸಾಗರ ಕಂಡು ಮಂಡ್ಯ ಚುನಾವಣೆಗೆ ಬಂದಿದ್ದಾರೆ. ಅವರು ನಿಜವಾಗಲು ಒಕ್ಕಲಿಗರಾ ಎಂದು ಪ್ರಶ್ನಿಸಿದ ಶಿವರಾಮೇಗೌಡ, ಸುಮಲತಾ ಮತ್ತು ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಸುರೇಶ್‍ಗೌಡರನ್ನು ಕರೆ ತಂದ ರಮ್ಯಾರನ್ನ ಓಡಿಸಿದ್ದೇನೆ. ಅಂಬರೀಶ್‍ರನ್ನೂ ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು ಎಂದು ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ವಿರುದ್ಧ ಕಿಡಿಕಾರಿದ್ದರು.