– 12 ಗಂಟೆ ಕೌನ್ಸೆಲಿಂಗ್ ಬಳಿಕವೂ ನಿರ್ಧಾರದಿಂದ ಹಿಂದೆ ಸರಿಯದ ಭಾವಿ ಅತ್ತೆ
ಲಕ್ನೋ: ಉತ್ತರ ಪ್ರದೇಶದ ಅಲಿಘರ್‌ನಲ್ಲಿ (Uttar Pradesh’s Aligarh) ಭಾವಿ ಅಳಿಯ ಮತ್ತು ಅತ್ತೆಯ ಪ್ರೇಮ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 10 ದಿನಗಳ ಬಳಿಕ ಪೊಲೀಸರ ಎದುರು ಶರಣಾದ ಸಪ್ನಾ ದೇವಿ ಮತ್ತು ಭಾವಿ ಅಳಿಯ ರಾಹುಲ್ ಈಗ ಒಟ್ಟಿಗೆ ಜೀವನ ಕಳೆಯಲು ನಿರ್ಧರಿಸಿದ್ದಾರೆ.
ತನ್ನ ಮಗಳಿಗೆ ನಿಶ್ಚಯವಾಗಿದ್ದ ಭಾವಿ ಅಳಿಯನೊಂದಿಗೆ ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಳು. ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿಹೋಗಲು ಕಾರಣ ಏನೆಂಬುದನ್ನ ತಿಳಿಸಿದ್ದಾಳೆ.
12 ಗಂಟೆಗಳ ಕಾಲ ಕೌನ್ಸೆಲಿಂಗ್:
ರಾಹುಲ್ ಮತ್ತು ಸಪ್ನಾ ದೇವಿ ಪೊಲೀಸರಿಗೆ ಶರಣಾದಾಗ ಸಪ್ನಾ ತನ್ನ ಕುಟುಂಬಸ್ಥರಿಂದ ಅನುಭವಿಸುತ್ತಿದ್ದ ತೊಂದರೆಗಳನ್ನು ಹೇಳಿಕೊಂಡಿದ್ದಳು. ಪತಿ ನಿತ್ಯ ಥಳಿಸುತ್ತಿದ್ದ, ಮಗಳೂ ಸಹ ಜಗಳ ಆಡುತ್ತಿದ್ದಳು, ಇದರಿಂದ ನನ್ನ ಮಾನಸಿಕ ನೆಮ್ಮದಿ ಹಾಳಾಗಿತ್ತು ಎಂದು ಹೇಳಿದ್ದಳು. ಅಲ್ಲದೇ ರಾಹುಲ್ ಸಹ ನಾನು ಇಲ್ಲದೇ ಇದ್ದಿದ್ದರೇ ಅವಳು ಬದುಕುತ್ತಿರಲಿಲ್ಲ ಎಂದು ಹೇಳಿದ್ದ. ಇದಾದ ಬಳಿಕ ಪೊಲೀಸರು ಸಪ್ನಾ ಮತ್ತು ಪತಿಗೆ 12 ಗಂಟೆಗಳ ಕಾಲ ಕೌನ್ಸೆಲಿಂಗ್ ನಡೆಸಿದರು. ಸಪ್ನಾಳ ಪತಿ ಮತ್ತು ಆತನ ಕುಟುಂಬಸ್ಥರೊಂದಿಗೆ ಮಾತನಾಡಿಸಿ, ಮನವೊಲಿಸುವ ಪ್ರಯತ್ನ ಮಾಡಿದರು. ಆದ್ರೆ ಸಪ್ನಾ ಮಾತ್ರ ರಾಹುಲ್ ಜೊತೆಗೇ ಜೀವನ ಕಳೆಯುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಪೊಲೀಸರು ಸಪ್ನಾಳನ್ನ ರಾಹುಲ್ ಜೊತೆಗೆ ಕಳುಹಿಸಿದ್ರು ಎಂದು ವರದಿಗಳು ತಿಳಿಸಿವೆ. ಆದ್ರೆ ಸಪ್ನಾ ದೇವಿ ಪತಿ, ಅವಳು ದೋಚಿರುವ ಎಲ್ಲಾ ಹಣ ಮತ್ತು ಚಿನ್ನಾಭರಣ ಹಿಂದಿರುಗಿಸುವವರೆಗೆ ಇಬ್ಬರನ್ನೂ ಬಿಡಲ್ಲ ಎಂದು ಹೇಳಿದ್ದಾನೆ.
ಏನಿದು ಪ್ರಕರಣ?
ಸಪ್ನಾಳ ಮಗಳು ಅನಿತಾಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಸಪ್ನಾ ಓಡಿ ಹೋಗಿದ್ದಳು. ಇದು ಇಡೀ ಕುಟುಂಬವನ್ನು ದಿಗ್ಭ್ರಮೆಗೊಳಿಸಿತ್ತು.
ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಭಾನುವಾರ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್‌ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ಮಾರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ಅನಿತಾ ನೊಂದು ನುಡಿದಿದ್ದಳು.
ಸಪ್ನಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ಸಪ್ನಾ ಮತ್ತು ರಾಹುಲ್ ಪತ್ತೆಗೆ ಬಲೆಬೀಸಿದ್ದರು.