ಲಕ್ನೋ: ಪತಿ ತ್ರಿವಳಿ ತಲಾಖ್ ನೀಡಿದ್ದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಕ್ಕೆ ಪತ್ನಿ ಹಾಗೂ ಅತ್ತೆಯನ್ನು ಸಜೀವ ದಹನ ಮಾಡಿರುವ ಘಟನೆ ಉತ್ತರ ಪ್ರದೇಶದ ಶ್ರವಸ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
22 ವರ್ಷದ ಮಹಿಳೆಯು ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದರ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಮಹಿಳೆ ದೂರು ನೀಡಲು ತೆರಳಿದಾಗ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ, ದಂಪತಿಯನ್ನು ಕರೆಸಿ ಒಟ್ಟಿಗೆ ಇರುವಂತೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಆದರೆ, ಪೊಲೀಸರ ಸಲಹೆಯನ್ನು ಗಂಭೀರವಾಗಿ ಪರಿಗಣಿಸದ ನಫೀಸ್, ತನ್ನ ಪತ್ನಿಗೆ ದೂರ ಹೋಗುವಂತೆ ತಿಳಿಸಿದ್ದಾನೆ. ಇದು ವಿವಾದಕ್ಕೆ ತಿರುಗಿದ್ದು, ನಂತರ ಕುಟುಂಬದವರೆಲ್ಲರೂ ಸೇರಿ ಮಹಿಳೆಯನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಕುಟುಂಬದವರು ಹೇಳುವಂತೆ, ಸಯೀದಾ ಅವರ ಪತಿ ಮುಂಬೈನಲ್ಲಿ ವಾಸಿಸುತ್ತಿದ್ದು, ಪತಿ ಫೋನಿನಲ್ಲಿಯೇ ತ್ರಿವಳಿ ತಲಾಖ್ ನೀಡುವುದಾಗಿ ಹೇಳಿದ್ದಾನೆ. ಇದನ್ನು ವಾಪಸ್ ಪಡೆಯಲು ತನ್ನ ಪತಿಗೆ ಸೂಚಿಸುವಂತೆ ಪೊಲೀಸರ ಬಳಿ ತೆರಳಿದ್ದಾಳೆ. ಆಗ ಪೊಲೀಸರು ಆಗಸ್ಟ್ 15ರಂದು ಪತಿ ಗ್ರಾಮಕ್ಕೆ ಆಗಮಿಸಿದ ನಂತರ ದಂಪತಿಯನ್ನು ಕರೆದು ಒಟ್ಟಿಗೆ ಇರುವಂತೆ ಸಲಹೆ ನೀಡಿದ್ದಾರೆ.
ಆಗ ಸಿಟ್ಟಿಗೆದ್ದ ಪತಿ ಹಾಗೂ ಆತನ ಕುಟುಂಬಸ್ಥರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಪತಿಯು ಆಕೆಯ ಕೂದಲುಗಳನ್ನು ಹಿಡಿದು ಎಳೆದಾಡಿದ್ದು, ಇತರರು ಆಕೆಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಈ ದೃಶ್ಯವನ್ನು ಆಕೆಯ 5 ವರ್ಷದ ಮಗಳು ಸಹ ನೋಡಿದ್ದು, ಬೆಚ್ಚಿ ಬಿದ್ದಿದ್ದಾಳೆ. ಮಹಿಳೆಯ ಪತಿ, ಅಳಿಯಂದಿರು ಹಾಗೂ ಮೂವರು ಇತರ ಮಹಿಳೆಯರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಹಿಳೆಯ 5 ವರ್ಷದ ಪುತ್ರಿ ಹೇಳಿಕೆ ನೀಡಿದ್ದು, ನನ್ನ ತಂದೆ, ತಾಯಿಯ ಕೂದಲನ್ನು ಹಿಡಿದು ಎಳೆದಿದ್ದಾನೆ. ಅಲ್ಲದೆ, ನನ್ನ ಇಬ್ಬರು ಚಿಕ್ಕಮ್ಮ ತಾಯಿ ಮೇಲೆ ಸೀಮೆ ಎಣ್ಣೆ ಸುರಿದಿದ್ದಾರೆ. ನಂತರ ನನ್ನ ಅಜ್ಜಿ ಅವಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾಳೆ.
ಪತಿ ಮತ್ತು ಆತನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಯೀದಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಅಲ್ಲದೆ, ಮಹಿಳೆ ಆಗಸ್ಟ್ 6ರಂದು ಪೊಲೀಸರಿಗೆ ದೂರು ನೀಡಲು ಬಂದಾಗ ಏಕೆ ಸ್ವೀಕರಿಸಿಲ್ಲ ಎನ್ನವುದರ ಕುರಿತು ಸಹ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.