ಲಕ್ನೋ: ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ಜಾರಿಗೊಳಿಸಿದೆ. ಆದರೆ ತ್ರಿವಳಿ ತಲಾಖ್ ನೀಡುವುದು ಮಾತ್ರ ತಪ್ಪುತ್ತಿಲ್ಲ. ಚುಯಿಂಗ್ ಗಮ್ ತಿನ್ನಲು ಪತ್ನಿ ನಿರಾಕರಿಸಿದಕ್ಕೆ ನ್ಯಾಯಾಲಯದ ಆವರಣದಲ್ಲೇ, ವಕೀಲರ ಸಮ್ಮುಖದಲ್ಲಿ ಪತಿ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಮ್ರಾಯ್ ಗ್ರಾಮದ ಸೈಯದ್ ರಶೀದ್ ತನ್ನ ಪತ್ನಿ ಸಿಮ್ಮಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ಪತ್ನಿ ಸಿಮ್ಮಿ ಪತಿ ವಿರುದ್ಧ ದೂರು ನೀಡಿದ್ದಳು. ಈ ಹಿನ್ನೆಲೆ ಲಕ್ನೋದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಪತಿ ಹಾಗೂ ಪತ್ನಿ ಬಂದಿದ್ದರು. ಈ ವೇಳೆ ಪತ್ನಿ ವಕೀಲರ ಜೊತೆ ಮಾತನಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪತಿ ಆಕೆಗೆ ಚುಯಿಂಗ್ ಗಮ್ ನೀಡಿದ್ದಾನೆ. ಆದರೆ ಅದನ್ನು ಪತ್ನಿ ನಿರಾಕರಿಸಿದ್ದಳು. ಇಷ್ಟಕ್ಕೆ ಕೋಪಗೊಂಡ ಪತಿ ವಕೀಲರ ಮುಂದೆಯೇ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟು ನ್ಯಾಯಾಲಯದಿಂದ ಹೊರಹೋಗಿದ್ದಾನೆ.
Advertisement
Advertisement
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ವಿವಿಧ ವಿಭಾಗಗಳ ಅಡಿಯಲ್ಲಿ ಈಗಾಗಲೇ ರಶೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Advertisement
ಈ ಹಿಂದೆ ಕೂಡ ಕ್ಷುಲ್ಲಕ ಕಾರಣಕ್ಕೆ ತ್ರಿವಳಿ ತಲಾಖ್ ಕೊಟ್ಟ ಪ್ರಕರಣಗಳು ನಡೆದಿದ್ದವು. ಕೆಲವು ಪ್ರಕರಣಗಳಲ್ಲಿ ಪತಿ ಕರೆ ಅಥವಾ ಮೆಸೇಜ್ ಮಾಡಿ ಪತ್ನಿಗೆ ತಲಾಖ್ ಕೊಟ್ಟಿದ್ದಾರೆ. ಸರ್ಕಾರ ಈ ತ್ರಿವಳಿ ತಲಾಖ್ ಪದ್ಧತಿ ಮೇಲೆ ನಿರ್ಬಂಧ ಹೇರಿದ್ದರು, ಈಗಲೂ ಈ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ.