ಲಕ್ನೋ: ವ್ಯಕ್ತಿಯೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡ ಬಂದ 28 ವರ್ಷದ ತನ್ನ ಮಗನನ್ನೇ ತಾಯಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮುಕೇಶ್ ಪರಾಶರ್ ಎಂದು ಗುರುತಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿ ಉಷಾ ಪರಾಶರ್, ಲವ್ವರ್ ನೌಶದ್ ಹಾಗೂ ಕೊಲೆಗೆ ಸಹಾಯ ಮಾಡಿದ್ದ ಬಿಲಾಲ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಮಗನ ಕೊಲೆಯ ಬಳಿಕ ಕುಟುಂಬ, ಯುವಕ ನಾಪತ್ತೆಯಾಗಿರುವುದಾಗಿ ಮೇ 20ರಂದು ಟಿಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೇ 21ರಂದು ನರ್ ಹೈದ ಗ್ರಾಮದ ಬ್ರಹ್ಮಪುರಿ ಪ್ರದೇಶದಲ್ಲಿ ಮುಕೇಶ್ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಮುಕೇಶ್ ಅಸಹಜ ಸಾವಲ್ಲ. ಬದಲಾಗಿ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ವರದಿಯಲ್ಲಿ ಬೆಳಕಿಗೆ ಬಂದಿದೆ.
ವರದಿಯ ಬಳಿಕ ಸ್ಥಳೀಯ ಪೊಲೀಸರಿಗೆ ಈ ಕೊಲೆಯ ಉದ್ದೇಶ ಕಂಡುಹಿಡಿಯುವಲ್ಲಿ ವಿಫಲರಾದ್ರು. ಹೀಗಾಗಿ ಪೊಲೀಸರು ಕ್ರೈಂ ಬ್ರ್ಯಾಂಚ್ ಅವರ ಸಹಾಯ ಪಡೆದ್ರು. ಈ ವೇಳೆ ಮುಕೇಶ್ ತಾಯಿಗೆ ನೌಶದ್ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ಮುಕೇಶ್ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ತಾಯಿ ಮಗನ ನಡುವೆ ಜಗಳ ನಡೆದಿದ್ದು, ಉಷಾ ತನ್ನ ಮಗನನ್ನೇ ಕೊಲೆ ಮಾಡಲು ನಿರ್ಧರಿಸಿದ್ದಳು. ಅದಕ್ಕಾಗಿ ತನ್ನ ಪ್ರಿಯತಮನ ಸಹಾಯ ಪಡೆದಿರುವುದು ಬೆಳಕಿಗೆ ಬಂದಿದೆ ಅಂತ ಎಸ್‍ಎಸ್‍ಪಿ ರಾಜೇಶ್ ಪಾಂಡೇ ತಿಳಿಸಿದ್ದಾರೆ.
ವಿಚಾರಣೆಯ ವೇಳೆ 40 ವರ್ಷದ ಮಹಿಳೆ, ಮಗನ ಮೇಲೆಯೇ ಆರೋಪ ಮಾಡಿ ತನಿಖಾ ತಂಡವನ್ನು ದಾರಿ ತಪ್ಪಿಸಲು ಯತ್ನಿಸಿದ್ದಳು. ತನ್ನ ಮಗ ಕುಡಿದು ಜನರೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಆಕಸ್ಮಾತ್ತಾಗಿ ಟ್ಯೂಬ್ ವೆಲ್ ಗೆ ಬಿದ್ದು ಆತ ಮೃತಪಟ್ಟಿರಬೇಕು ಅಂತ ಹೇಳುವ ಮೂಲಕ ತನಿಖೆ ದಾರಿ ತಪ್ಪಿಸಲು ಮುಂದಾಗಿದ್ದಾಳೆ. ಆರೋಪಿ ಉಷಾ ಈ ಹಿಂದೆ ಅಂದರೆ ಎರಡು ತಿಂಗಳ ಹಿಂದೆಯಷ್ಟೇ ಪಾನೀಯದಲ್ಲಿ ಕ್ರಿಮಿನಾಶಕ ಹಾಕಿ ಕೊಟ್ಟಿದ್ದಳು. ಆದ್ರೆ ಈ ಪ್ಲಾನ್ ನಲ್ಲಿ ಆಕೆ ವಿಫಲವಾಗಿದ್ದಳು ಅಂತ ಪೊಲೀಸರು ತಿಳಿಸಿದ್ದಾರೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಉಷಾ ಹಾಗೂ ನೌಶದ್ ಮೊಬೈಲ್ ವಶಪಡಿಸಿಕೊಂಡು ಕರೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಮೇ 20ರಂದು ನೌಶದ್, ಮುಕೇಶ್ ಹಾಗೂ ರೌಡಿಶೀಟರ್ ಬಿಲಾಲ್ ಮದ್ಯಪಾನ ಮಾಡಿದ್ದಾರೆ. ಬಳಿಕ ನೌಶದ್ ಮತ್ತು ಬಿಲಾಲ್ ಸೇರಿ ಮುಕೇಶ್ ನನ್ನು ಅಜ್ಞಾನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಿ ಹಗ್ಗದಿಂದ ಆತನ ಕುತ್ತಿಗೆ ಬಿಗಿದಿದ್ದಾರೆ. ಮುಕೇಶ್ ಮೃತಪಟ್ಟ ನಂತರ ಆತನ ಮೃತದೇಹವನ್ನು ಹತ್ತಿರ ಟ್ಯೂಬ್ ವೆಲ್ ಗೆ ಬಿಸಾಕಿ ಹೋಗಿದ್ದಾರೆ. ಸದ್ಯ ಕೊಲೆಗೆ ಬಳಸಿದ್ದ ಹಗ್ಗವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಅಂತ ಪಾಂಡೇ ತಿಳಿಸಿದ್ದಾರೆ.