ಯುಪಿ ಸಚಿವೆಯಿಂದ ಬಾರ್ ಉದ್ಘಾಟನೆ – ಟೀಕೆ ಬಳಿಕ ವರದಿ ಕೇಳಿದ ಸಿಎಂ ಆದಿತ್ಯನಾಥ್

Public TV
1 Min Read
up 1

ಲಕ್ನೋ: ಉತ್ತರಪ್ರದೇಶದ ಸಚಿವೆಯೊಬ್ಬರು ಬಾರ್ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ತೆಗೆದಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಹಿಳಾ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಬೀರ್ ಬಾರ್ ಉದ್ಘಾಟನೆ ಮಾಡಿದ್ದು, ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸ್ವಾತಿ ಸಿಂಗ್ ಟೇಪ್ ಕತ್ತರಿಸುತ್ತಿದ್ದು, ಐಪಿಎಸ್ ಅಧಿಕಾರಿಗಳಾದ ಗೌರವ್ ಸಿಂಗ್ ಹಾಗೂ ನೇಹಾ ಪಾಂಡೆ ಕೂಡ ಜೊತೆಯಲ್ಲಿರೋದನ್ನ ಫೋಟೋಗಳಲ್ಲಿ ನೋಡಬಹುದು. ಇದರ ವಿರುದ್ಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಬಗ್ಗೆ ವರದಿ ಕೇಳಿದ್ದಾರೆ.

ಸ್ವಾತಿ ಸಿಂಗ್ ಅವರು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ದಯಾಶಂಕರ್ ಸಿಂಗ್ ಅವರ ಪತ್ನಿಯಾಗಿದ್ದು, ಮೇ 20ರಂದು ಈ ಬಾರ್ ಉದ್ಘಾಟನೆ ಮಾಡಿದ್ದಾರೆ ಎಂದು ವರದಿಯಾಗಿದೆ.

swati singh 1

ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದು ಬಿಜೆಪಿಯ ನಿಜವಾದ ಮುಖ ಎಂದು ಟೀಕಿಸಿದ್ದಾರೆ. ಅಧಿಕಾರದಲ್ಲಿರುವ ಬಿಜೆಪಿಯ ಎರಡು ವಿರುದ್ಧ ಮುಖಗಳನ್ನು ತೋರಿಸುತ್ತಿದೆ. ಅವರು ಹೇಳೋದೇ ಒಂದು ಮಾಡೋದು ಇನ್ನೊಂದು ಎಂದು ಸಮಾಜವಾದಿ ಪಕ್ಷದ ವಕ್ತಾರರಾದ ರಾಜೇಂದ್ರ ಚೌಧರಿ ಕಿಡಿ ಕಾರಿದ್ದಾರೆ.

ಕಾಂಗ್ರೆಸ್ ಮುಖಂಡ ದ್ವಿಜೇಂದರ್ ತ್ರಿಪಾಠಿ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ಅವರು ಜನರನ್ನ ಮೆಚ್ಚಿಸುವ ಸಲುವಾಗಿ ಮಾತಾಡ್ತಾರೆ. ನಾಯಕರು ಮದ್ಯ ನಿಷೇಧದ ಬಗ್ಗೆ ಮಾತಾಡ್ತಾರೆ. ಆದ್ರೆ ಅವರ ಸಚಿವರೇ ಬಾರ್ ಉದ್ಘಾಟನೆಗೆ ಹೋಗ್ತಾರೆ ಎಂದು ಟೀಕಿಸಿದ್ದಾರೆ.

swati singh

ಆದ್ರೆ ಬಿಜೆಪಿ ವಕ್ತಾರರಾದ ರಾಕೇಶ್ ತ್ರಿಪಾಠಿ ಇದನ್ನ ಸಮರ್ಥಿಸಿಕೊಂಡಿದ್ದು, ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿಲ್ಲ. ಸಚಿವೆ ಮಾಡಿದ್ದು ಕಾನೂನು ಬಾಹಿರವಲ್ಲ. ಅವರು ಯಾವ ಸಂದರ್ಭದಲ್ಲಿ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೋ ಗೊತ್ತಿಲ್ಲ. ಈ ಬಾರ್‍ನ ಮಾಲೀಕರು ಮಹಿಳೆಯಾಗಿದ್ದು, ಮಹಿಳೆಯರ ಉದ್ಯಮಶೀಲತೆಯನ್ನ ಪ್ರೋತ್ಸಾಹಿಸಲು ಅಲ್ಲಿಗೆ ಹೋಗಿದ್ದರು ಎಂದು ಹೇಳಲಾಗಿದೆ ಎಂದಿದ್ದಾರೆ.

swati singh 2

Share This Article
Leave a Comment

Leave a Reply

Your email address will not be published. Required fields are marked *