ಲಕ್ನೋ: ವರದಕ್ಷಿಣೆ ನೀಡಿಲ್ಲ ಎಂಬ ಕಾರಣ ಅಳಿಯನೊಬ್ಬ ಮಾವನ ಕಿವಿ ಕತ್ತರಿಸಿ ಅತ್ತೆಯ ಮೂಗು ಕಚ್ಚಿದ ಘಟನೆ ಉತ್ತರ ಪ್ರದೇಶದ ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿದೆ.
ಹಲ್ಲೆ ಮಾಡಿದ ಅಳಿಯನನ್ನು ಮೊಹಮ್ಮದ್ ಅಶ್ಫಾಕ್ ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ಅತ್ತೆ ಮಾವನನ್ನು, ಗಂಥಾ ರೆಹಮಾನ್ ಮತ್ತು ಗುಲ್ಶನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಗುಲ್ಶನ್ ಅವರನ್ನು ಹೆಚ್ಚಿನ ಚಿಕೆತ್ಸೆಗಾಗಿ ದೆಹಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
Advertisement
Advertisement
ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಫ್‍ಸಿಐ) ನಾಲ್ಕನೇ ಹಂತದ ಉದ್ಯೋಗಿಯಾಗಿರುವ ಗಂಥಾ ರೆಹಮಾನ್ ಅವರ ತನ್ನ ಪುತ್ರಿ ಚಾಂದ್ ಬಿ ಅವರನ್ನು ಒಂದು ವರ್ಷದ ಹಿಂದೆ ಬರೇಲಿಯ ರೀಯಲ್ ಎಸ್ಟೇಟ್ ವ್ಯಾಪಾರಿಯಾದ ಮೊಹಮ್ಮದ್ ಅಶ್ಫಾಕ್‍ನಿಗೆ ಕೊಟ್ಟು ವಿವಾಹ ಮಾಡಿದ್ದಾರೆ. ಈ ಸಮಯದಲ್ಲಿ ರೆಹಮಾನ್ ತನ್ನ ಮಗಳಿಗೆ 10 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಕೂಡ ನೀಡಿದ್ದಾರೆ. ಆದರೆ ಚಾಂದ್ ಬಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಆಕೆಯ ಗಂಡ 5 ಲಕ್ಷ ರೂ. ಹೆಚ್ಚು ವರದಕ್ಷಿಣೆ ನೀಡುವಂತೆ ಹೇಳಿದ್ದಾನೆ. ಆದರೆ ರೆಹಮಾನ್ ಇದನ್ನು ನಿರಾಕರಿಸಿದಾಗ, ಅಶ್ಫಾಕ್ ಭಾನುವಾರ ಚಂದ್ ಬಿಯನ್ನು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಈ ವಿಷಯವನ್ನು ತಿಳಿದು ರೆಹಮಾನ್ ಮತ್ತು ಗುಲ್ಶನ್ ಜೊತೆಯಲ್ಲಿ ಮಗಳ ಮನೆಗೆ ಬಂದಿದ್ದಾರೆ. ಈ ವೇಳೆ ಎರಡು ಕುಟುಂಬದ ನಡುವೆ ಈ ವಿಚಾರಕ್ಕೆ ಮಾತುಕತೆ ನಡೆದಿದೆ. ಈ ವೇಳೆ ಕೋಪಗೊಂಡ ಅಶ್ಫಾಕ್ ಮತ್ತು ಅವರ ಕುಟುಂಬದವರು, ರೆಹಮಾನ್ ಮತ್ತು ಗುಲ್ಶನ್ ಅವರನ್ನು ಥಳಿಸಿದ್ದಾರೆ. ಈ ಜಗಳದಲ್ಲಿ ಅಶ್ಫಾಕ್ ಅತ್ತೆ ಗುಲ್ಶನ್ ಅವರ ಮೂಗು ಕಚ್ಚಿದ್ದಾನೆ ಮತ್ತು ಮಾವ ರೆಹಮಾನ್ ಅವರ ಕಿವಿಯನ್ನು ಚಾಕುವಿನಿಂದ ಕತ್ತರಿಸಿದ್ದಾನೆ.
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಅವನಿಶ್ ಸಿಂಗ್, ಈ ಪ್ರಕರಣಕ್ಕೆ ಸಂಬಧಿಸಿದಂತೆ ಐಪಿಸಿ ಸೆಕ್ಷನ್ 323, 326 ಮತ್ತು 504ರ ಅಡಿಯಲ್ಲಿ ಅಶ್ಫಾಕ್ ಕುಟುಂಬದ ಐದು ಜನರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅವರು ತಪ್ಪಿಸಿಕೊಂಡಿದ್ದು ಶೀಘ್ರದಲ್ಲೇ ಅವರನ್ನು ಬಂಧಿಸಲಿದ್ದೇವೆ ಎಂದು ಹೇಳಿದ್ದಾರೆ.