ರಾಯ್‌ಬರೇಲಿ: ನಾಸಿರಾಬಾದ್ (Nasirabad) ಪ್ರದೇಶದಲ್ಲಿ ಅಧಿಕಾರಿಗಳ ಅನುಮತಿಯಿಲ್ಲದೆ ‘ನೌಟಂಕಿ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ನೆರೆದಿದ್ದ ಜನರೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಗ್ರಾಮ ಮುಖ್ಯಸ್ಥನ ಪ್ರತಿನಿಧಿಯೊಬ್ಬನಿಂದ ಆತನ ಎಂಜಲನ್ನೇ ಪೊಲೀಸರು ಬಲವಂತವಾಗಿ ನೆಕ್ಕಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅನಧಿಕೃತವಾಗಿ ನೌಟಂಕಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ನಸೀರಾಬಾದ್‌ನಲ್ಲಿನ ಕಪೂರ್‌ಪುರ್ ( Kapurpur) ಗ್ರಾಮದ ಮುಖ್ಯಸ್ಥನ ಪ್ರತಿನಿಧಿ ಸುಶೀಲ್ ಶರ್ಮ, ಮದ್ಯದ ಅಮಲಿನಲ್ಲಿ ಜನರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಶರ್ಮ ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಆತ ಪೊಲೀಸರೊಂದಿಗೆ ಕೂಡ ಅನುಚಿತವಾಗಿ ವರ್ತಿಸಿದ್ದಾನೆ ಎಂದು ರಾಯ್ ಬರೇಲಿ ಪೊಲೀಸ್ ವರಿಷ್ಠಾಧಿಕಾರಿ ಯಶ್ವೀರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ
ಇದೇ ವೇಳೆ ಪೊಲೀಸರ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯ ಮೂಲಕ ತನಿಖೆ ನಡೆಸಲಾಗುತ್ತದೆ. ಅವರು ಸಲ್ಲಿಸಿದ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಪೊಲೀಸರ ಆರೋಪಗಳನ್ನು ಅಲ್ಲಗಳೆದಿರುವ ಸುಶೀಲ್ ಶರ್ಮ, ತಡರಾತ್ರಿ ಗ್ರಾಮಕ್ಕೆ ಆಗಮಿಸಿದ ಪೊಲೀಸರು ನೌಟಂಕಿ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ನನಗೆ ಸೂಚಿಸಿದರು. ಇದರೊಂದಿಗೆ ನನ್ನೊಂದಿಗೆ ಇನ್ನೂ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು, ನಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ದೈಹಿಕ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ, ನನ್ನ ಉಗುಳನ್ನು ನಾನೇ ನೆಕ್ಕುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ವಿಶ್ವಗುರು ಬಸವಣ್ಣರನ್ನೇ ಕತ್ತಲೆಗೆ ದೂಡಿದ ಬಿಬಿಎಂಪಿ – ನಿರ್ವಹಣೆ ಇಲ್ಲದೇ ಉದುರುತ್ತಿದೆ ಪುತ್ಥಳಿ ಬಣ್ಣ!
ನಸೀರಾಬಾದ್ ಠಾಣಾಧಿಕಾರಿ ಶಿವಕಾಂತ್ ಪಾಂಡೆ ನನ್ನಿಂದ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾನೆ. ಈ ನಡುವೆ, ಘಟನೆಯ ಕುರಿತು ಶನಿವಾರ ಪೊಲೀಸ್ ವರಿಷ್ಠಾಧಿಕಾರಿಗೆ ಲಿಖಿತ ದೂರು ನೀಡಿರುವ ರಾಷ್ಟ್ರೀಯ ಪಂಚಾಯತಿ ರಾಜ್ ಗ್ರಾಮ್ ಪ್ರಧಾನ್ ಸಂಘಟನ್, ಈ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಇದನ್ನೂ ಓದಿ: Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್ ಜಾಮ್!