ಲಕ್ನೋ: ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳು ಮತ್ತು ಬ್ಲಾಕ್‌ಗಳನ್ನು ಗುರುತಿಸಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು ಎಂದು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ತಿಳಿಸಿದೆ.
ಬಿಜೆಪಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಹಿಂದುತ್ವವನ್ನು ಪ್ರತಿಪಾದಿಸುವವರು. ಮೂಲಸೌಕರ್ಯ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳತ್ತ ಗಮನಹರಿಸಿರುವುದು ಪಕ್ಷದ ಕಾರ್ಯತಂತ್ರದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಇದನ್ನೂ ಓದಿ: ನಮ್ಮ ಹೊಸ ಪಕ್ಷಕ್ಕೆ ಜಮ್ಮು-ಕಾಶ್ಮೀರದ ಜನರೇ ಹಿಂದೂಸ್ತಾನಿ ಹೆಸರಿಡಲಿ: ಆಜಾದ್
ಅಕ್ರಮ ಮದರಸಾಗಳನ್ನು ತೊಡೆದುಹಾಕಲು ಸಮೀಕ್ಷೆಯನ್ನು ಪ್ರಾರಂಭಿಸಿ ಸುದ್ದಿಯಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಡ್ಯಾನಿಶ್ ಅನ್ಸಾರಿ, ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಇಲಾಖೆ ಗಮನಹರಿಸುತ್ತಿದೆ ಎಂದು ಖಚಿತಪಡಿಸಿದ್ದಾರೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 53.73 ಕೋಟಿ ರೂ. ಅನುದಾನ ನೀಡಿದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಹಲವು ಸ್ಥಳಗಳಲ್ಲಿ ಒಟ್ಟು 14 ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಯೋಜನೆಗಳ ಪೈಕಿ 200 ಹಾಸಿಗೆಗಳ ಬಾಲಕಿಯರ ಹಾಸ್ಟೆಲ್ ಮತ್ತು ಸರ್ಕಾರಿ ಬಾಲಕಿಯರ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ವಿವಿಧೋದ್ದೇಶ ಸಮ್ಮೇಳನ ಸಭಾಂಗಣವು ಗಾಜಿಪುರದಲ್ಲಿ ತಲೆಯೆತ್ತಲಿದೆ. ಅದೇ ರೀತಿ ದೇವರಿಯಾದ ಪತ್ತದೇವದಲ್ಲಿರುವ ಸರ್ಕಾರಿ ಬಾಲಕಿಯರ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ 100 ಹಾಸಿಗೆಗಳ ಬಾಲಕಿಯರ ಹಾಸ್ಟೆಲ್ ನಿರ್ಮಿಸಲಾಗುವುದು. ಇತರ ಯೋಜನೆಗಳ ಪೈಕಿ 50% ಕ್ಕಿಂತ ಹೆಚ್ಚು ಅಲ್ಪಸಂಖ್ಯಾತ ಜನಸಂಖ್ಯೆಯನ್ನು ಹೊಂದಿರುವ ರಾಂಪುರ ಜಿಲ್ಲೆಯ ಸ್ವರ್ ಪ್ರದೇಶದಲ್ಲಿ ಸರ್ಕಾರಿ ಹೋಮಿಯೋಪತಿ ಔಷಧಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ
ರಾಜ್ಯದ ಎಲ್ಲಾ 19 ವಿಭಾಗಗಳ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮಗಳ ಮೂಲಕ ಗರಿಷ್ಠ ಮುಸ್ಲಿಂ ಯುವಕರಿಗೆ ಉದ್ಯೋಗ ಒದಗಿಸುವುದು ಪ್ರಮುಖ ಗುರಿಯಾಗಿದೆ.