ಲಕ್ನೋ: ಪೋಷಕರೇ ಎಂಟು ವರ್ಷದ ಬಾಲಕಿಯನ್ನ ಮಾರಾಟ ಮಾಡಿದ್ದು, ಈಗ 16 ವರ್ಷದಲ್ಲಿರುವಾಗಲೇ ಆಕೆ ನಾಲ್ಕು ಮಕ್ಕಳ ತಾಯಿಯಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಸಂಭಾಲ್ ಮೂಲದ ಬಾಲಕಿಯನ್ನು ರಾಜಸ್ಥಾನದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಸದ್ಯಕ್ಕೆ ಸಂತ್ರಸ್ತೆ ಕ್ಷೇಮವಾಗಿದ್ದು, ಆಕೆಯ ತಂದೆ, ಮಲತಾಯಿ ಮತ್ತು ಚಿಕ್ಕಮ್ಮನ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ?: 2010 ರಲ್ಲಿ ನನ್ನ ಅಮ್ಮ ಮೃತಪಟ್ಟರು. ಬಳಿಕ ತಂದೆ ಎರಡನೇ ಮದುವೆ ಮಾಡಿಕೊಂಡರು. ಆದರೆ ಮಲತಾಯಿ ಬಂದ ಮೇಲೆ ನಮಗೆ ಚಿತ್ರಹಿಂಸೆ ನೀಡುತ್ತಿದ್ದರು. ನಾವು ನಾಲ್ವರು ಸಹೋದರಿಯರು ಮತ್ತು ಒಬ್ಬ ಸಹೋದರ ಒಟ್ಟು ಐದು ಮಂದಿ ಮಕ್ಕಳು. ಒಂದು ದಿನ ಚಿಕ್ಕಮ್ಮ ಅವರ ಸಹೋದರಿಯ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ 50 ವರ್ಷದ ವ್ಯಕ್ತಿಗೆ ನನ್ನನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದರು. ನಂತರ ಆತನನ್ನ ಮದುವೆಯಾಗಿ 6 ವರ್ಷಗಳಲ್ಲಿ ನಾನು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದು, ಈ ಹೇಳಿಕೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ.
2010ರಲ್ಲಿ ಪೋಷಕರು ಸಂತ್ರಸ್ತೆಯನ್ನು ರಾಜಸ್ಥಾನದ ಭರತ್‍ಪುರದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದರು. ಈಕೆಯ ಜೊತೆ ನಾಲ್ಕು ಹಾಗೂ ಆರು ವರ್ಷದ ಸಹೋದರಿಯರನ್ನು ಕೂಡ ರಾಜಸ್ಥಾನದ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಎಫ್‍ಐಆರ್ ನಲ್ಲಿ ಆರೋಪಿಸಲಾಗಿದೆ. ಮಾರಾಟವಾದ ಬಳಿಕ ಸಂತ್ರಸ್ತೆಯನ್ನು ಬಂಧನದಲ್ಲಿಟ್ಟು ಹಲವು ಬಾರಿ ಅತ್ಯಾಚಾರ ಎಸಗಿದ್ದು, ಆದ್ದರಿಂದ ಆಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬಳಿಕ ಸಂತ್ರಸ್ತೆ ಬಂಧನದಲ್ಲಿಟ್ಟಿದ್ದ ಮನೆಯಿಂದ ತಪ್ಪಿಸಿಕೊಂಡು ಸಂಭಾಲ್ ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತೆ ದೂರಿನಲ್ಲಿ ತಂದೆ, ಮಲತಾಯಿ, ಚಿಕ್ಕಮ್ಮ ಮತ್ತು ಆಕೆಯನ್ನ ಖರೀದಿಸಿದ ವ್ಯಕ್ತಿಯ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಿದ್ದಾಳೆ. ಆದ್ದರಿಂದ ಅವರ ವಿರುದ್ಧ ಐಪಿಸಿ 366, 372 ಮತ್ತು 370 ಎ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ನಖಾಸಾ ಪೊಲೀಸ್ ಠಾಣೆಯ ಅಧಿಕಾರಿ ಸರ್ವೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.
ದೂರು ನೀಡಿದ ಬಳಿಕ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಮಕ್ಕಳಿಗೆ ಜನ್ಮ ನೀಡಿರುವುದು ದೃಢಪಟ್ಟಿದೆ ಎಂದು ಸರ್ಕಲ್ ಅಧಿಕಾರಿ ಸುದೇಶ್ ಕುಮಾರ್ ಹೇಳಿದರು.