ಲಕ್ನೋ: 22 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆ ಹೀನ ಕೃತ್ಯವನ್ನು ಆತನ ಸಹೋದರಿ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿದೆ.
ಉತ್ತರ ಪ್ರದೇಶದ ಮುಜಾಫರ್ ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಸೋಮವಾರ ಆರೋಪಿ ಯುವಕ ಮತ್ತು ಆತನ ಸಹೋದರಿ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಪೊಲೀಸರು ಇನ್ನೂ ಆ ವಿಡಿಯೋವನ್ನು ವಶಪಡಿಸಿಕೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳೆಯರು ಒಬ್ಬರ ಮೇಲೊಬ್ಬರು ಪ್ರತಿ ದೂರು ಸಲ್ಲಿಸಿದ್ದು, ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ರುಕ್ಸಾನಾ(ಹೆಸರು ಬದಲಿಸಲಾಗಿದೆ) ಸಮ್ರೀನ್(ಹೆಸರು ಬದಲಿಸಲಾಗಿದೆ) ವಿರುದ್ಧ ಕಳ್ಳತನ ಆರೋಪದಡಿ ದೂರು ದಾಖಲಿಸಿದ್ದಳು. ಭಾನುವಾರ ಸಮ್ರೀನ್ ರುಕ್ಸಾನಾ ಕುಟುಂಬ ಸದಸ್ಯರ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಳು. ಭಾನುವಾರ ಮತ್ತೆ ರುಕ್ಸಾನಾ ತನ್ನ 16 ವರ್ಷ ವಯಸ್ಸಿನ ಸಹೋದರಿಯನ್ನು ಸಮ್ರೀನ್ ಸಹೋದರ ಅತ್ಯಾಚಾರ ಮಾಡಿದ್ದಾನೆ. ಅತ್ಯಾಚಾರದ ವಿಡಿಯೋವನ್ನು ಸಮ್ರೀನ್ ರೆಕಾರ್ಡ್ ಮಾಡಿದ್ದಾಳೆ ಎಂದು ದೂರು ದಾಖಲಿಸಿರುವುದಾಗಿ ವರದಿಗಳು ತಿಳಿಸಿವೆ.
ಈ ಇಬ್ಬರು ಮಹಿಳೆಯರು ಮೊದಲಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆದ್ರೆ ಮೂರು ತಿಂಗಳ ಹಿಂದೆ ಜಗಳವಾಗಿ ತಮ್ಮ ಮನೆಗಳಿಗೆ ಹಿಂದಿರುಗಿದ್ದರು. ಬಳಿಕ ಒಬ್ಬರ ಮೇಲೊಬ್ಬರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಸಮ್ರೀನ್ ಕುಟುಂಬದವರು ನನ್ನ ಸಹೋದರಿಯನ್ನ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದರು. ಇದಕ್ಕೆ ಸಹೋದರಿ ನಿರಾಕರಿಸಿದ್ದರಿಂದ ಸಮ್ರೀನ್ ಸಹೋದರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವಿಡಿಯೋವನ್ನು ಸಮ್ರೀನ್ ರೆಕಾರ್ಡ್ ಮಾಡಿದ್ದಾಳೆ ಎಂದು ರುಕ್ಸಾನಾ ಆರೋಪ ಮಾಡಿರುವುದಾಗಿ ಸಿವಿಲ್ ಲೈನ್ಸ್ ಪೋಲಿಸ್ ಠಾಣೆಯ ಅಧಿಕಾರಿ ಡಿ.ಕೆ ತ್ಯಾಗಿ ಹೇಳಿದ್ದಾರೆ.
ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳಿಸಲಾಗಿದೆ. ವರದಿ ಬಂದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.