ಲಕ್ನೋ: ಉತ್ತರ ಪ್ರದೇಶದ ಡೆಪ್ಯೂಟಿ ಸೂಪರಿಟೆಂಡೆಂಟ್ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಂ ದಂಪತಿಗೆ ಪೊಲೀಸ್ ಠಾಣೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಡಿಎಸ್‍ಪಿ ಅಶೋಕ್ ಕುಮಾರ್ ದೀಕ್ಷಿತ್ ಈ ರೀತಿ ಮುಸ್ಲಿಂ ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸಹರಾನ್ಪುರದ ಸರ್ಕಾರಿ ರೈಲ್ವೆ ಪೊಲೀಸ್ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
Advertisement
ಅಕ್ಟೋಬರ್ 12 ರಂದು ಈ ಘಟನೆ ಸಂಭವಿಸಿದೆ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಮುಸ್ಲಿಂ ದಂಪತಿಗೆ ಲಾಠಿ ಮೂಲಕ ಹೊಡೆಯುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಮೊರಾದಾಬಾದ್ ನ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ತನಿಖೆ ಮಾಡುವಂತೆ ರೈಲ್ವೆ ಅಧಿಕಾರಿ ಸಂಜಯ್ ಸಿಂಘಾಲ್ ಆದೇಶಿಸಿದ್ದಾರೆ.
Advertisement
ಮುಸ್ಲಿಂ ದಂಪತಿಯ ಮೇಲೆ ಹಲ್ಲೆ ಮಾಡಿದ್ದ ಅಶೋಕ್ ಕುಮಾರ್ ದೀಕ್ಷಿತ್ ಅಕ್ಟೋಬರ್ 31 ರಂದು ನಿವೃತ್ತರಾಗಿದ್ದಾರೆ. ಈ ಬಗ್ಗೆ ನಿವೃತ್ತಿ ಅಧಿಕಾರಿಯನ್ನು ವಿಚಾರಣೆ ಮಾಡಲಾಗುತ್ತದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಘಾಲ್ ಹೇಳಿದ್ದಾರೆ.
Advertisement
ವಿಡಿಯೋದಲ್ಲಿ ಏನಿದೆ?
ದೀಕ್ಷಿತ್ ಅವರು ಸಹರಾನ್ಪುರದ ರೈಲ್ವೆ ರಕ್ಷಣಾ ಪಡೆ(ಜಿಆರ್ ಪಿ) ನಿಲ್ದಾಣದಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡು ಮುಸ್ಲಿಂ ದಂಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಅವರು ಕೈಯಲ್ಲಿ ಲಾಠಿ ಹಿಡಿದಿರುವುದನ್ನು ನೋಡಬಹುದಾಗಿದೆ. ಬಳಿಕ ಯುವಕ ಮೊದಲು ಕುಳಿತಿದ್ದು, ಬಳಿಕ ಎದ್ದು ನಿಂತಿದ್ದಾನೆ. ಈ ವೇಳೆ ಪೊಲೀಸ್ ಯುವತಿಗೆ ಲಾಠಿಯಿಂದ ಹಲ್ಲೆ ಮಾಡಿ ಬೈದಿದ್ದಾರೆ. ನಂತರ ಯುವಕನ ಮೇಲೂ ಹಲ್ಲೆ ಮಾಡಿದ್ದಾರೆ. ಈ ಎಲ್ಲ ದೃಶ್ಯ ನಡೆಯುತ್ತಿದ್ದಾಗ ಇಬ್ಬರು ಪೊಲೀಸ್ ಅಧಿಕಾರಿಗಳು ಠಾಣೆಯ ಒಳಗೆ ಇರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವನ್ನು ನಾವು ನೋಡಿದ್ದೇವೆ. ಘಟನೆಯ ಬಗ್ಗೆ ತಿಳಿಯಲು ತನಿಖೆ ಮಾಡುತ್ತಿದ್ದೇವೆ. ವಿಡಿಯೋದಲ್ಲಿರುವ ವ್ಯಕ್ತಿಯನ್ನು ಗುರುತಿಸಲಾಗಿದೆ. ಆದರೆ ಈ ಬಗ್ಗೆ ಹಲ್ಲೆಗೊಳಗಾದವರಿಂದ ಯಾವುದೇ ಅಧಿಕೃತ ದೂರನ್ನು ಇನ್ನೂ ಸ್ವೀಕರಿಸಿಲ್ಲ ಎಂದು ರೈಲ್ವೆ ರಕ್ಷಣಾ ಪಡೆಯ ಎಸ್‍ಪಿ ಸುಭಾಷ್ ಚಂದ್ರ ದುಬೆ ಹೇಳಿದ್ದಾರೆ.
ದೀಕ್ಷಿತ್ ತಪ್ಪಿತಸ್ಥರೆಂದು ಪರಿಗಣಿಸಿದರೆ ಅವರ ವಿರುದ್ಧ ಇಲಾಖೆಯ ಕ್ರಮ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸಿಂಘಾಲ್ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv