ಲಕ್ನೋ: ಉತ್ತರ ಪ್ರದೇಶದ (Uttar Pradesh) ಕರ್ಹಾಲ್ ಕ್ಷೇತ್ರದಲ್ಲಿ ಗೋಣಿಚೀಲದಲ್ಲಿ 23 ವರ್ಷದ ದಲಿತ ಮಹಿಳೆಯ ಶವ ಪತ್ತೆಯಾಗಿದೆ. ಯುವತಿ ಉಪಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಬಯಸಿದ್ದರಿಂದ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಉಪಚುನಾವಣೆಯಲ್ಲಿ (UP By Election) ಬಿಜೆಪಿಗೆ (BJP) ಮತ ಹಾಕದಂತೆ ಸ್ಥಳೀಯ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಒತ್ತಡ ಹೇರುತ್ತಿದ್ದ. ಮೂರು ದಿನಗಳ ಹಿಂದೆ ಪ್ರಶಾಂತ್ ಯಾದವ್ ಎಂಬಾತ ತಮ್ಮ ಮನೆಗೆ ಬಂದು ಯಾವ ಪಕ್ಷಕ್ಕೆ ಮತ ಹಾಕುತ್ತೀರಿ ಎಂದು ಕೇಳಿದ್ದ. ತಮ್ಮ ಕುಟುಂಬಕ್ಕೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಸಿಕ್ಕಿರುವುದರಿಂದ ಬಿಜೆಪಿಗೆ ಮತ ಹಾಕುವುದಾಗಿ ನಮ್ಮ ಕುಟುಂಬ ಉತ್ತರಿಸಿತ್ತು. ನಂತರ ಯಾದವ್ ಬೆದರಿಕೆ ಹಾಕಿದ್ದ ಮತ್ತು ಸಮಾಜವಾದಿ ಪಕ್ಷಕ್ಕೆ ಮತ ಹಾಕುವಂತೆ ಕೇಳಿದ್ದ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಈ ಸಂಬಂಧ ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಶಾಂತ್ ಯಾದವ್ ಮತ್ತು ಮೋಹನ್ ಕಥೇರಿಯಾ ಎಂಬವರನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಸಾವಿನ ವಿಚಾರವಾಗಿ ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಇನ್ನೂ ರಾಜ್ಯದ 9 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವಿನ ಭಾರೀ ಆರೋಪದ ನಡುವೆ ಮಹಿಳೆಯ ಹತ್ಯೆ ನಡೆದಿರುವುದು ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ.