ಲಕ್ನೋ: ಚಿಕಿತ್ಸೆ ಮೂಲಕ 60ರ ವೃದ್ಧರನ್ನು 25ರ ಯುವಕರನ್ನಾಗಿ ಮಾಡೋದಾಗಿ ಹೇಳಿ ನೂರಾರು ವೃದ್ಧರಿಗೆ 35 ಕೋಟಿ ರೂ. ವಂಚಿಸಿದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.
ವಂಚಿಸಿದ ದಂಪತಿಯನ್ನು ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ಎಂದು ಗುರುತಿಸಲಾಗಿದೆ. ಇಬ್ಬರೂ ಕಾನ್ಪುರದಲ್ಲಿ ಥೆರಪಿ ಸೆಂಟರ್‌ನ್ನು ತೆರದಿದ್ದರು. ಬಳಿಕ ಇಸ್ರೇಲ್‌ನಿಂದ ತರಲಾದ ಯಂತ್ರವನ್ನು ಬಳಸಿ 60 ವರ್ಷದ ವ್ಯಕ್ತಿಯನ್ನು 25 ವರ್ಷ ವಯಸ್ಸಿನವರನ್ನಾಗಿ ಪರಿವರ್ತಿಸುತ್ತೇವೆ ಎಂದು ವೃದ್ಧರನ್ನು ನಂಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಪರ ಜಿಟಿಡಿ ಬ್ಯಾಟಿಂಗ್ | ಕಳ್ಳರು ಕಳ್ಳರು ಒಂದಾಗಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ವ್ಯಂಗ್ಯ
ಕಲುಷಿತ ಗಾಳಿಯಿಂದಾಗಿ ಜನರಿಗೆ ವೇಗವಾಗಿ ವಯಸ್ಸಾಗುತ್ತಿದೆ. ಆಕ್ಸಿಜನ್ ಥೆರಪಿ ಮೂಲಕ ಕೆಲವೇ ತಿಂಗಳೊಳಗೆ ಯುವಕರನ್ನಾಗಿ ಪರಿವರ್ತಿಸುತ್ತೇವೆ ಎಂದು ಹೇಳಿ ವೃದ್ಧರನ್ನು ನಂಬಿಸಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಂಪತಿಗೆ, ರೇಣು ಸಿಂಗ್ ಎಂಬವರು 10.75 ರೂ. ಲಕ್ಷ ನೀಡಿದ್ದಾರೆ. ನೂರಾರು ಜನರು ಇದೇ ರೀತಿ ಹಣ ನೀಡಿದ್ದಾರೆ. ಹೀಗೆ ಸುಮಾರು 35 ಕೋಟಿ ರೂ. ವಂಚಿಸಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.
ಈ ಸಂಬಂಧ ರೇಣು ಸಿಂಗ್ ದೂರು ದಾಖಲಿಸಿದ್ದಾರೆ. ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ದಂಪತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ದುಬೆ ದಂಪತಿ ವಿದೇಶಕ್ಕೆ ಪರಾರಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ್ ಖರ್ಗೆಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ