– ಶಾ ಮಾರ್ಗ ಮಧ್ಯೆ ಕಪ್ಪು ಬಾವುಟ ಬೀಸಲು ಸಿದ್ಧರಾಗಿದ್ದ ವಿದ್ಯಾರ್ಥಿನಿಯರು
ಅಲಹಾಬಾದ್: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾರ್ಗ ಮಧ್ಯೆ ಕಪ್ಪು ಬಾವುಟ ಪ್ರದರ್ಶಿಸಲು ಸಿದ್ಧರಾಗಿದ್ದ ವಿದ್ಯಾರ್ಥಿನಿಯರ ಜೊತೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ. ಶುಕ್ರವಾರ ಅಲಹಾಬಾದ್‍ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಅಮಾನವೀಯ ಕೃತ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಪೊಲೀಸರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Advertisement
ವಿಡಿಯೋದಲ್ಲಿ ಏನಿದೆ?
ಶುಕ್ರವಾರ ಅಮಿತ್ ಶಾ ಅಲಹಾಬಾದ್‍ಗೆ ಭೇಟಿ ನೀಡಿದ್ದರು. ಆ ವೇಳೆ ಅಲಹಾಬಾದ್ ವಿಶ್ವವಿದ್ಯಾಲಯದ ಒರ್ವ ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರು ಮಾರ್ಗ ಮಧ್ಯೆ ಅಮಿತ್ ಶಾ ಅವರಿಗೆ ಕಪ್ಪು ಧ್ವಜವನ್ನು ತೋರಿಸಿ ಅಡ್ಡಗಟ್ಟಲು ಪ್ರಯತ್ನಿಸಿದ್ದರು. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದು, ಕೂದಲು ಹಿಡಿದು ಎಳೆದಾಡಿ, ಲಾಠಿಯಿಂದ ಹೊಡೆದಿದ್ದಾರೆ. ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ನೇಹಾ ಯಾದವ್(25), ರಮಾ ಯಾದವ್(24) ಮತ್ತು ಕಿಶನ್ ಮೌರ್ಯ ಪೊಲೀಸರಿಂದ ಹಲ್ಲೆಗೊಳಗಾದ ವಿದ್ಯಾರ್ಥಿಗಳು. ಈ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೂವರು ವಿದ್ಯಾರ್ಥಿಗಳು ಸಮಾಜವಾದಿ ಪಕ್ಷದ ಸಮಾಜವಾದಿ ಚಿತ್ರ ಸಭಾಗೆ ಸೇರಿದವರು ಎಂದು ಹೇಳಲಾಗಿದೆ. ನೇಹಾ ಯಾದವ್ ಪಿಎಚ್‍ಡಿ ಓದುತ್ತಿದ್ದು, ರಮಾ ಯಾದವ್ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.