ಲಕ್ನೋ: ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಬಸ್ (Double Decker Bus0 ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು 18 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Lucknow Agra Expressway) ನಡೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಘಟನೆ ಮಾಹಿತಿ ಪಡೆದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು (UP Police) ಗಾಯಾಳುಗಳನ್ನು ರಕ್ಷಿಸಿದ್ದಾರೆ. ಬಳಿಕ ಚಿಕಿತ್ಸೆಗಾಗಿ ಬಂಗಾರ್‌ಮೌನ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಪ್ರಾಥಮಿಕ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಉನ್ನಾವೋ ಮ್ಯಾಜಿಸ್ಟ್ರೇಟ್ ಗೌರಂಗ್ ರಾಠಿ, ಬುಧವಾರ (ಇಂದು) ಮುಂಜಾನೆ 5:15ರ ಸುಮಾರಿಗೆ ಬಿಹಾರದ ಮೋತಿಹಾರಿಯಿಂದ ಬರುತ್ತಿದ್ದ ಡಬಲ್ ಡೆಕ್ಕರ್ ಖಾಸಗಿ ಬಸ್, ಹಾಲಿನ ಟ್ಯಾಂಕರ್‌ಗೆ (Milk Tanker) ಡಿಕ್ಕಿ ಹೊಡೆದಿದೆ. ಇದರಿಂದ 18 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಸುಮಾರು 20ಕ್ಕೂ ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಸ್‌ನ ಅತಿವೇಗದ ಚಾಲನೆಯೇ ಕಾರಣವಾಗಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಮೀಪದ ಗರ್ಹಾ ಗ್ರಾಮದ ನಿವಾಸಿಗಳು ಸಿಒ ಅರವಿಂದ್ ಚೌರಾಸಿಯಾ ನೇತೃತ್ವದ ಪೊಲೀಸ್ ತಂಡಕ್ಕೆ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ್ದಾರೆ. ಘಟನೆ ಕಂಡು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.