ಕೊಪ್ಪಳ: ಹೋಟೆಲಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿರುವ ಪ್ರಕರಣ ಕೊಪ್ಪಳದ ತಾಲೂಕಿನ ತಿಗರಿ ಗ್ರಾಮದಲ್ಲಿ ಬಯಲಿಗೆ ಬಂದಿದೆ.
ಗ್ರಾಮದ ಹೋಟೆಲ್‍ಗಳಲ್ಲಿ ದಲಿತರಿಗೆ ಹೊರಗಡೆ ನಿಲ್ಲಿಸಿ ನೀರು ಹಾಕಲಾಗುತ್ತಿದೆ. ಸವರ್ಣೀಯರ ಹೋಟೆಲಿನಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಿದ್ದು, ಜಾತಿ ತಾರತಮ್ಯ ಮಾಡಲಾಗುತ್ತಿದೆ. ಹೋಟೆಲಿನಲ್ಲಿ ದಲಿತರಿಗೆ ನೀರು ಎತ್ತಿ ಹಾಕುವ ದೃಶ್ಯಗಳು ಮೊಬೈಲಿನಲ್ಲಿ ಸೆರೆಯಾಗಿದೆ. ದಲಿತರು ಹೋಟೆಲ್‍ಗಳಲ್ಲಿ ನೀರು ಮುಟ್ಟುವ ಹಾಗಿಲ್ಲ. ಹೀಗಾಗಿ ದಲಿತರಿಗೆ ಪ್ಲಾಸ್ಟಿಕ್ ಜಗ್ ಮೂಲಕ ನೀರು ಹಾಕಲಾಗುತ್ತದೆ.
ಈ ಹೋಟೆಲಿನಲ್ಲಿ ದಲಿತರಿಗೆ ತಿನ್ನಲು ಪ್ಲೇಟ್ ಬದಲಾಗಿ ಪೇಪರ್ ಪ್ಲೇಟಿನಲ್ಲಿ ತಿಂಡಿ ಕೊಡುತ್ತಾರೆ. ಅಲ್ಲದೆ ನೀರು ಕೇಳಿದರೆ, ಮೇಲಿಂದ ಕೈಯಿಗೆ ನೀರು ಹಾಕುತ್ತಾರೆ. ಅವರಿಗೆ ಕುಡಿಯೋಕೆ ನೀರು ಕೊಡುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿದ್ದು, ಜಿಲ್ಲಾಧಿಕಾರಿಗಳು ಆ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಗೋವಿಂದ ಕಾರಜೋಳ, ನಾನು ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಎಸ್‍ಪಿ ಜೊತೆ ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ತಕ್ಷಣ ಪರಿಹಾರ ನೀಡಬೇಕು ಎಂದು ಸೂಚನೆ ನೀಡುತ್ತೇನೆ. ಈ ರೀತಿಯ ಘಟನೆಗಳು ನಡೆಯಬಾರದು ಎಂದು ನಾನು ಅವರಿಗೆ ಹೇಳುತ್ತೇನೆ ಎಂದು ಹೇಳಿದರು.