Connect with us

Latest

ಉನ್ನಾವೋ ಕೇಸ್ – ಅತ್ಯಾಚಾರಿ ಶಾಸಕ ಸೆಂಗಾರ್‌ಗೆ ಜೀವಾವಧಿ ಜೈಲು ಶಿಕ್ಷೆ

Published

on

ನವದೆಹಲಿ: ಉನ್ನಾವೋದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ದೋಷಿಯಾಗಿದ್ದ ಉಚ್ಚಾಟಿತ ಬಿಜೆಪಿ ಶಾಸಕ, ಕುಲದೀಪ್ ಸಿಂಗ್ ಸೆಂಗಾರ್‌ಗೆ  ಕೋರ್ಟ್ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಉನ್ನಾವೋ ಅತ್ಯಾಚಾರ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ತೀಸ್ ಹಜಾರಿ ಕೋರ್ಟ್ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಿಟಿಸಿದೆ. ಸೆಂಗಾರ್‌ಗೆ ಈ ಪ್ರಕರಣದಲ್ಲಿ 25 ಲಕ್ಷ ರೂ. ದಂಡದ ಜೊತೆಗೆ ಅತ್ಯಾಚಾರ ಸಂತ್ರಸ್ತೆಗೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆ.

ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಡಿ. 16 ರಂದು ಸೆಕ್ಷನ್ 376 (5,6) ಹಾಗೂ ಪೋಕ್ಸೊ ಅಡಿ ದೋಷಿ ಎಂದು ಹೇಳಿತ್ತು. 2017ರಲ್ಲಿ ಉನ್ನಾವೋ ಮೂಲದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿತ್ತು. ಅಲ್ಲದೆ ಸಂತ್ರಸ್ತೆ ಕೋರ್ಟ್ ಗೆ ತೆರಳುತ್ತಿದ್ದ ವೇಳೆ ಕೊಲೆ ಯತ್ನ ನಡೆಸಲಾಗಿತ್ತು. ಈ ಪ್ರಕರಣ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ಕುರಿತು ಸಿಬಿಐ ಹಾಗೂ ಆರೋಪಿಗಳ ಪರ ವಕೀಲರಿಂದ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪು ಪ್ರಕಟಿಸಿ ಇಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.

ಬಿಜೆಪಿಯ ಉಚ್ಚಾಟಿತ ಶಾಸಕನಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಿನ್ನೆಲೆ ಸುಪ್ರೀಂಕೋರ್ಟ್ ಲಕ್ನೋ ನಿಂದ ದೆಹಲಿಯ ತೀಸ್ ಹಜಾರಿ ಕೋರ್ಟ್ ಗೆ ಪ್ರಕರಣವನ್ನು ವರ್ಗಾಯಿಸಿತ್ತು. ಆಗಸ್ಟ್ 5 ರಿಂದ ಕೋರ್ಟ್ ಪ್ರತಿನಿತ್ಯ ವಿಚಾರಣೆ ನಡೆಸಿತ್ತು.

ಕೋರ್ಟ್ ಅಪರಾಧಿ ಎಂದು ಘೋಷಿಸುತ್ತಿದ್ದಂತೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಕುಲದೀಪ್ ಸಿಂಗ್ ಸೆಂಗಾರ್ 1990ರಲ್ಲಿ ಕಾಂಗ್ರೆಸ್‍ನಲ್ಲಿದ್ದರೆ, 2002ರಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‍ಪಿ) ಸೇರಿ ಶಾಸಕನಾಗಿ ಆಯ್ಕೆಯಾಗಿದ್ದರು. ನಂತರ ಸಮಾಜವಾದಿ ಪಕ್ಷ ಸೇರಿ 2007, 2012 ರಲ್ಲಿ ಜಯಗಳಿಸಿದ್ದು ನಂತರ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿ ಜಯಗಳಿಸಿದ್ದರು.

ಉನ್ನಾವೋ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರಿಯ ತನಿಖಾ ದಳ (ಸಿಬಿಐ) ದೆಹಲಿ ಜಿಲ್ಲಾ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ವೇಳೆ ಕುಲದೀಪ್ ಸಿಂಗ್ ಸೆಂಗಾರ್ ಅತ್ಯಾಚಾರ ಮಾಡಿದ ಒಂದು ವಾರದ ನಂತರ ಅದೇ ಸಂತ್ರಸ್ತೆಯನ್ನು ಇನ್ನೂ ಮೂವರು ಉನ್ನಾವೋದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಿತ್ತು.

ಅಪ್ರಾಪ್ತೆಯನ್ನು ಜೂನ್ 11, 2017 ರಂದು ಉನ್ನಾವೊದಿಂದ ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ರೇಪ್ ಕೇಸ್ ದೇಶಾದ್ಯಂತ ಸುದ್ದಿಯಾದ ಬಳಿಕ ಬಿಜೆಪಿ ಕುಲ್‍ದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಉಚ್ಛಾಟಿಸಿತ್ತು.

Click to comment

Leave a Reply

Your email address will not be published. Required fields are marked *