ಬಿಎಸ್‍ವೈ ನಾಯಕತ್ವದ ವಿರುದ್ಧ ಪಕ್ಷದೊಳಗೆ ಭಾರೀ ಅಸಹನೆ?- 4 ಪುಟಗಳ ಅನಾಮಧೇಯ ಪತ್ರ ವೈರಲ್

Public TV
3 Min Read
yeddyurappa bsy serious thinking

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ 6 ತಿಂಗಳಾಗಿದೆ. ಆದರೆ ಈ ಆರು ತಿಂಗಳಲ್ಲಿ ನಡೆದ ವಿದ್ಯಮಾನಗಳು ಹತ್ತುಹಲವು. ಯಡಿಯೂರಪ್ಪ ಅವರಿಗೆ ಈಗಿನ ಸರ್ಕಾರ ನಡೆಸುವುದು ಕತ್ತಿ ಮೇಲಿನ ನಡಿಗೆಯಂತಾಗಿದೆ. ಒಂದು ಕಡೆ ಬಿಜೆಪಿ ಹೈಕಮಾಂಡ್ ಅಸಹಕಾರ. ಇನ್ನೊಂದು ಕಡೆ ಸ್ವಪಕ್ಷೀಯರ ಅಸಹಕಾರ, ಅಸಹನೆ. ಇನ್ನೊಂದು ಕಡೆ ಆರ್ಥಿಕ ದುಸ್ಥಿತಿ. ಮತ್ತೊಂದು ಕಡೆ ವಲಸಿಗರನ್ನು ನಿಭಾಯಿಸೋ ತಲೆನೋವು. ಸಚಿವಾಕಾಂಕ್ಷಿಗಳ ಒತ್ತಡ ಲಾಬಿ. ಇಷ್ಟೆಲ್ಲವನ್ನೂ ಸಂಭಾಳಿಸಿಕೊಂಡು ಸಿಎಂ ಯಡಿಯೂರಪ್ಪ ಆಡಳಿತ ನಡೆಸುವ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದಾರೆ.

letter

ಆದರೆ ಈಗ ಯಡಿಯೂರಪ್ಪರಿಗೆ ಆಘಾತಕಾರಿ ತರುವ ಬೆಳವಣಿಗೆಯೊಂದು ಸ್ಪಪಕ್ಷೀಯರಿಂದಲೇ ನಡೆದಿದೆ. ಯಡಿಯೂರಪ್ಪ ನಾಯಕತ್ವದ ವಿರುದ್ಧವೇ ವಿರೋಧಿ ಬಣ ತೆರೆ ಹಿಂದೆಯೇ ನಿಂತುಕೊಂಡು ದನಿ ಎತ್ತಿದೆ. ಯಡಿಯೂರಪ್ಪ ಕಾರ್ಯವೈಖರಿ ಬಗ್ಗೆ ಪಕ್ಷದ ಒಳಗಿನವರಲ್ಲೇ ಅಸಹನೆ, ಅತೃಪ್ತಿ ಮನೆ ಮಾಡಿದೆಯಾ ಎಂಬ ಅನುಮಾನ ಬಲವಾಗಿ ಮೂಡಿದೆ. ಇದಕ್ಕೆ ಕಾರಣವಾಗಿರೋದು ಆ ನಾಲ್ಕು ಪುಟಗಳ ಅನಾಮಧೇಯ ಪತ್ರ.

bs yeddyurappa

ಹೌದು. ಕಳೆದ ಕೆಲವು ದಿನಗಳಿಂದಲೂ ರಾಜ್ಯ ಬಿಜೆಪಿ ಪಾಳಯದಲ್ಲಿ ನಾಲ್ಕು ಪುಟಗಳ ಆ ಅನಾಮಧೇಯರು ಬರೆದ ಅನಾಮಧೇಯ ಪತ್ರವೊಂದು ಹರಿದಾಡ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಪತ್ರ ಭಾರೀ ಸದ್ದು ಮಾಡ್ತಿದೆ ಎನ್ನಲಾಗಿದೆ. ಸಿಎಂ ಯಡಿಯೂರಪ್ಪರ ಕಾರ್ಯವೈಖರಿ, ಪುತ್ರ ವಿಜಯೇಂದ್ರರ ಬಗ್ಗೆ ಈ ಅನಾಮಧೇಯ ಪತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಯಡಿಯೂರಪ್ಪರನ್ನು ಒಂದೆಡೆ ಹೊಗಳಲಾಗಿದ್ದರೆ, ಇನ್ನೊಂದೆಡೆ ಅವರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಲಾಗಿದೆ. ಇತ್ತ ಆಡಳಿತದಲ್ಲಿ ಮೂಗು ತೂರಿಸುತ್ತಿರುವ ಪುತ್ರ ವಿಜಯೇಂದ್ರರ ಬಗ್ಗೆನೂ ಆಕ್ಷೇಪ ಪತ್ರದಲ್ಲಿ ವ್ಯಕ್ತಪಡಿಸಲಾಗಿದೆ.

letter 2

ಅನಾಮಧೇಯ ಪತ್ರದಲ್ಲಿ ಏನಿದೆ..?
ಯಡಿಯೂರಪ್ಪ ರಾಜಕೀಯವಾಗಿ ನಿವೃತ್ತಿ ತೆಗೆದುಕೊಂಡು ಪಕ್ಷದಲ್ಲಿ ಹಿರಿಯ ಮಾರ್ಗದರ್ಶಕರಾಗಿ ಮುಂದುವರಿಯಲಿ ಅನ್ನೋದು ಈ ಪತ್ರದ ಪ್ರಮುಖ ಆಗ್ರಹ. ಯಡಿಯೂರಪ್ಪ ಮಾರ್ಗದರ್ಶಕರಾದರೂ ಆಗಲಿ ಅಥವಾ ಯಾವುದಾದರೊಂದು ರಾಜ್ಯದ ರಾಜ್ಯಪಾಲರಾಗಲಿ. ಆದರೆ ಸದ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯುವುದು ಬೇಡ ಅನ್ನೋ ಭಾವನೆಯನ್ನು ಅನಾಮಧೇಯರು ಪತ್ರದ ಮೂಲಕ ರವಾನಿಸಿದ್ದಾರೆ. ನಾವು ಯಡಿಯೂರಪ್ಪ ಅವರ ನಿಷ್ಠಾವಂತ ಬಳಗದಲ್ಲಿರುವವರು. ಆದರೆ ನಮ್ಮ ನೋವು ಯಾರ ಬಳಿ ತೋಡಿಕೊಳ್ಳುವುದು? ಹೈಕಮಾಂಡ್ ಬಳಿ ಹೋದರೆ ಸ್ವಲ್ಪ ದಿನ ಕಾಯಿರಿ ಅಂತಾರೆ ಎಂದು ಅನಾಮಧೇಯರು ತಮ್ಮ ಬೇಗುದಿಯನ್ನು ಈ ಪತ್ರದಲ್ಲಿ ಹೊರ ಹಾಕಿದ್ದಾರೆ. ಯಡಿಯೂರಪ್ಪ ಅವರ ದೈಹಿಕ ಅಸಮರ್ಥತೆಯಿಂದ ಸರ್ಕಾರ ನಿಷ್ಕ್ರಿಯವಾಗಿದೆ. ಹಾಗಾಗಿ ಸಿಎಂ ಸ್ಥಾನ ತ್ಯಜಿಸಲಿ. ಯಡಿಯೂರಪ್ಪ ತಮ್ಮ ಸಮುದಾಯದ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಅಸೂಯೆ ಮತ್ತು ದ್ವೇಷಗಳನ್ನು ಯಡಿಯೂರಪ್ಪ ಮೈಗೂಡಿಸಿಕೊಂಡಿದ್ದಾರೆ. ಯಡಿಯೂರಪ್ಪ ಪಕ್ಷ ಸಿದ್ಧಾಂತ ಮತ್ತು ಸಂವಿಧಾನ ವಿರುದ್ಧ ನಡೆದುಕೊಳ್ತಿದ್ದಾರೆ. ಇಂತಹ ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಿವೃತ್ತಿಗೊಳಿಸಲಿ. ಅವರ ಅನುಭವದ ಮೇರೆಗೆ ಮಾರ್ಗದರ್ಶಕರಾಗಿ ಮಾಡಲಿ ಎಂದು ಹೈಕಮಾಂಡ್ಗೆ ಅನಾಮಧೇಯರು ಒತ್ತಾಯ ಮಾಡಿದ್ದಾರೆ.

BY VIJAYENDRA

ಯಡಿಯೂರಪ್ಪ ಅವರನ್ನು ರಾಜ್ಯಪಾಲರಾಗಿ ಮಾಡಲಿ. ಯಡಿಯೂರಪ್ಪ ಸಿಎಂ ಆಗಿ ಆಡಳಿತ ನಡೆಸಲು ದೈಹಿಕವಾಗಿ ಅಸಮರ್ಥರು. ಅವರಿಗೆ ಆಡಳಿತ ನಡೆಸಲು ದೇಹದ ಆರೋಗ್ಯ ಸ್ಪಂದಿಸುತ್ತಿಲ್ಲ. ಯಡಿಯೂರಪ್ಪ ವಯೋಸಹಜ ದೈಹಿಕ ಅಸಮರ್ಥತೆಯಿಂದ ನರಳುತ್ತಿದ್ದಾರೆ. ಯಡಿಯೂರಪ್ಪ ಸುತ್ತ ಒಂದು ಕೊಟೆಯೇ ಸೃಷ್ಟಿಯಾಗಿದೆ. ಅವರ ವಂಶದ ನಾಲ್ಕು ತಲೆಮಾರಿನವರೇ ಯಡಿಯೂರಪ್ಪ ಸುತ್ತ ಇದ್ದಾರೆ ಎಂದು ಪತ್ರದಲ್ಲಿ ಅಸಮಾಧಾನ ಹೊರ ಹಾಕಲಾಗಿದೆ.

letter 444

ವಿಜಯೇಂದ್ರ ವಿರುದ್ಧವೂ ಅಸಮಧಾನ:
ವಿಜಯೇಂದ್ರ ಸೂಪರ್ ಸಿಎಂ, ಡೀಫ್ಯಾಕ್ಟೋ ಸಿಎಂ ಅಂತ ವಿಪಕ್ಷ ಮತ್ತು ಸ್ವಪಕ್ಷದಲ್ಲೇ ಹೇಳುತ್ತಿದ್ದಾರೆ. ಶಿವಾನಂದ ಸರ್ಕಲ್ ಬಳಿ ಇರುವ ವಿಜಯೇಂದ್ರರ ಅಪಾರ್ಟ್‍ಮೆಂಟ್ ಮತ್ತೊಂದು ಪವರ್ ಸೆಂಟರ್ ಆಗಿದೆ ಎಂದು ಪತ್ರದಲ್ಲಿ ಕಿಡಿ ಕಾರಿದ್ದಾರೆ. ಯಡಿಯೂರಪ್ಪ ಭೇಟಿಗೆ ಬರೋರು ಮೊದಲು ವಿಜಯೇಂದ್ರರ ಭೇಟಿ ಮಾಡುವ ಅಗತ್ಯ ಇದೆ. ತಮ್ಮ ಭೇಟಿಗೆ ಬರೋರನ್ನು ವಿಜಯೇಂದ್ರ ಬಳಿ ಖುದ್ದು ಯಡಿಯೂರಪ್ಪ ಕಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರ ಬಗ್ಗೆ ಗುಣಗಾನ ರೂಪದಲ್ಲಿರುವ ಪತ್ರದ ಮಾತುಗಳು ಪರೋಕ್ಷವಾಗಿ ಅಣಕಿಸುವಂತಿವೆ.

ಸದ್ಯ ಈ ಅನಾಮಧೇಯ ಪತ್ರ ಬಿಜೆಪಿ ಪಾಳಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಯಡಿಯೂರಪ್ಪ ಸಹ ಪತ್ರದ ಬಗ್ಗೆ ಗಂಭೀರವಾಗಿದ್ದು, ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ ಎನ್ನಲಾಗಿದೆ.  ಪತ್ರದ ಜನಕರ ಪತ್ತೆಗೆ ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *