ಬೆಂಗಳೂರು: ಜನಪ್ರತಿನಿಧಿಗಳು ಇನ್ಮುಂದೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಹೈಟೆಕ್ ಆಸ್ಪತ್ರೆಗೆ ಹೋಗಿ ಕೋಟಿ ಕೋಟಿ ಆರೋಗ್ಯ ವಿಮೆಯನ್ನು ಸರ್ಕಾರದ ಕಡೆಯಿಂದ ಪಾವತಿ ಮಾಡಿಸಿಕೊಳ್ಳುವಂತಿಲ್ಲ. ಯಾಕೆಂದರೆ ಕರ್ನಾಟಕದಲ್ಲಿ ಮಾದರಿ ಹೆಲ್ತ್ ಸ್ಕೀಂ ಬರಲಿದೆ.
ಜುಲೈ 1ರಿಂದ ಯೂನಿವರ್ಸಲ್ ಹೆಲ್ತ್ ಸ್ಕೀಂ ಜಾರಿಗೆ ಬರಲಿದೆ. ತುರ್ತು ಸೇವೆ ಹೊರತುಪಡಿಸಿ, ಉಳಿದೆಲ್ಲ ಆರೋಗ್ಯ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆ ಕಡೆ ಜನಸಾಮಾನ್ಯರು ಹಾಗೂ ಜನಪ್ರತಿನಿಧಿಗಳು ತೆರಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಅಲಭ್ಯವಿದ್ದಲ್ಲಿ, ವೈದ್ಯರು ಶಿಫಾರಸ್ಸು ಪತ್ರ ನೀಡಿದರೆ ಮಾತ್ರ ಖಾಸಗಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಈ ಸ್ಕೀಂಗೆ ಆರೋಗ್ಯ ಸಚಿವರಾಗಿರುವ ಶಿವಾನಂದ ಪಾಟೀಲರಿಂದಲೂ ಅನುಮೋದನೆ ಸಿಕ್ಕಿದೆ.
ವೈದ್ಯರು ಸುಖಾಸುಮ್ಮನೆ ಶಿಫಾರಸ್ಸು ಮಾಡಿದರೆ ಅವರ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಆಗಸ್ಟ್ ವರೆಗೆ ಯಶಸ್ವಿನಿ, ಆರೋಗ್ಯ ಸಂಜೀವಿನಿ ಸೇರಿದಂತೆ ಆರೋಗ್ಯ ವಿಮೆ ಕಾರ್ಡ್ ಗಳಲ್ಲಿ ಸೇವೆ ಪಡೆದುಕೊಳ್ಳಬಹುದು. ತದನಂತರ ಈ ಹೆಲ್ತ್ ಕಾರ್ಡ್ ಸ್ಥಗಿತಗೊಳ್ಳಲಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಯೂನಿವರ್ಸಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಿದ್ದು, ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡು ದಾರರಿಗೆ ಶೇ.30 ರಷ್ಟು ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈಗಾಗಲೇ 14 ಜಿಲ್ಲೆಗಳಲ್ಲಿ ಕಾರ್ಡ್ ವಿತರಣೆ ಕೆಲಸ ಶುರುವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅನುಮೋದನೆಗೊಂಡಿರುವ ಈ ಹೊಸ ಕಾಯ್ದೆಯನ್ನು ಕುಮಾರಸ್ವಾಮಿ ಸರ್ಕಾರವೂ ಮುಂದುವರೆಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಹದಗೆಟ್ಟಿರುವ ಸಮಯದಲ್ಲಿ ಇದನ್ನು ನಿರ್ವಹಿಸಲು ಸಾಧ್ಯನಾ ಅನ್ನುವ ಪ್ರಶ್ನೆ ಇದೀಗ ಮೂಡಿದೆ.