Connect with us

ವಿಡಿಯೋ: ವೈದ್ಯನನ್ನ ಅಮಾನುಷವಾಗಿ ವಿಮಾನದಿಂದ ಹೊರದೂಡಿದ ಯುನೈಟೆಡ್ ಏರ್‍ಲೈನ್ಸ್ ವಿರುದ್ಧ ಭಾರೀ ಖಂಡನೆ

ವಿಡಿಯೋ: ವೈದ್ಯನನ್ನ ಅಮಾನುಷವಾಗಿ ವಿಮಾನದಿಂದ ಹೊರದೂಡಿದ ಯುನೈಟೆಡ್ ಏರ್‍ಲೈನ್ಸ್ ವಿರುದ್ಧ ಭಾರೀ ಖಂಡನೆ

ನ್ಯೂಯಾರ್ಕ್: ಯುನೈಟೆಡ್ ಏರ್‍ಲೈನ್ಸ್ ಸಿಬ್ಬಂದಿ ವೈದ್ಯರೊಬ್ಬರನ್ನು ವಿಮಾನದಿಂದ ಅಮಾನುಷವಾಗಿ ಹೊರಗೆಸೆದ ಘಟನೆ ಚಿಕಾಗೋದ ಓ ಹೇರ್ ವಿಮಾನ ನಿಲ್ದಾಣದಲ್ಲಿ ಭಾನುವಾರದಂದು ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ವೀಡಿಯೋದಿಂದ ಏರ್‍ಲೈನ್ಸ್ ವಿರುದ್ಧ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.

ಕೆಂಟಕಿಯ ಲೂಯಿಸ್‍ವಿಲ್ಲೆ ಗೆ ಹೊರಟಿದ್ದ ಯುನೈಟೆಡ್ ಏರ್‍ಲೈನ್ಸ್ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರನ್ನು ವಿಮಾನದಿಂದ ಕೆಳಗಿಳಿಯುವಂತೆ ಏರ್‍ಲೈನ್ಸ್ ಸಿಬ್ಬಂದಿ ಹೇಳಿದ್ದಾರೆ. ಆದ್ರೆ ಇದಕ್ಕೆ ಅವರು ಒಪ್ಪದಿದ್ದಾಗ ಪೊಲೀಸ್‍ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಅವರನ್ನು ದರದರನೆ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ಇದನ್ನು ನಿಲ್ಲಿಸುವಂತೆ ವಿಮಾನದಲ್ಲಿದ್ದ ಇತರೆ ಪ್ರಯಾಣಿಕರು ಹೇಳಿದರೂ ಅಧಿಕಾರಿಗಳು ಮಾತ್ರ ಅಮಾನುಷವಾಗಿ ನಡೆದುಕೊಂಡಿದ್ದಾರೆ.

ಆದ್ರೆ ಪ್ರಯಾಣಿಕರನ್ನ ಹೊರಗೆಸೆದಿದ್ದು ಅವರ ದುರ್ನಡತೆ ಅಥವಾ ಭದ್ರತಾ ದೃಷ್ಟಿಯಿಂದಲ್ಲ. ಯುನೈಟೆಡ್ ಏರ್‍ಲೈನ್ಸ್‍ನವರು ವಿಮಾನಕ್ಕೆ ಹೆಚ್ಚುವರಿ ಬುಕ್ಕಿಂಗ್ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಕೆಲವು ಪ್ರಯಾಣಿಕರು ಸ್ವಯಂಪ್ರೇತವಾಗಿ ವಿಮಾನದ ಸೀಟ್ ಬಿಟ್ಟುಕೊಡುವಂತೆ ಕೇಳಿದ್ದರು. ಇದಕ್ಕೆ ಪರಿಹಾರ ಹಣ ಮತ್ತು ಹೋಟೆಲ್‍ನಲ್ಲಿ ತಂಗುವ ವ್ಯವಸ್ಥೆ ನೀಡಲಾಗುತ್ತದೆ ಎಂದು ಹೇಳಿದ್ದರು ಎನ್ನಲಾಗಿದೆ. ಆದ್ರೆ ಯಾರೂ ಮುಂದೆ ಬರದಿದ್ದಾಗ ಏರ್‍ಲೈನ್ಸ್‍ನ ಮ್ಯಾನೇಜರ್ ಬಂದು ಯಾರು ವಿಮಾನದಿಂದ ಕೆಳಗಿಳಿಯಬೇಕೆಂದು ನಾವಾಗೇ ಆಯ್ಕೆ ಮಾಡುತ್ತೇವೆ ಎಂದು ಹೇಳಿ ನಾಲ್ವರು ಪ್ರಯಾಣಿಕರನ್ನ ಆಯ್ಕೆ ಮಾಡಿದ್ದರು. ಅದರಂತೆ ಮೂವರು ವಿಮಾನದಿಂದ ಕೆಳಗಿಳಿದಿದ್ದರು. ಆದ್ರೆ ಒಬ್ಬರು ಮಾತ್ರ ನಿರಾಕರಿಸಿದಾಗ ಅವರನ್ನ ಬಲವಂತವಾಗಿ ಧರಧರನೆ ಎಳೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಪ್ರಯಾಣಿಕನನ್ನ ಅಮಾನುಷವಾಗಿ ದರದರನೆ ಎಳೆದುಕೊಂಡು ಹೋಗಿದ್ದು, ಅವರ ಬಾಯಿಯಿಂದ ರಕ್ತಸ್ರಾವವಾಗುತ್ತಿರುವ ವೀಡಿಯೋ ಫೇಸ್‍ಬುಕ್ ಹಾಘೂ ಟ್ವಿಟ್ಟರ್‍ನಲ್ಲಿ ಅಪ್‍ಲೋಡ್ ಆಗಿದೆ. ವಿಮಾನದಿಂದ ಹೊರದೂಡಲ್ಪಟ್ಟ ಪ್ರಯಾಣಿಕ ವೈದ್ಯರಾಗಿದ್ದು, ಸೋಮವಾರದಂದು ಕಲಸಕ್ಕೆಂದು ಲೂಯಿಸ್‍ವಿಲ್ಲೆಯಲ್ಲಿ ಇರಬೇಕಿದ್ದ ಕಾರಣ ತನ್ನ ಸೀಟ್ ಬಿಟ್ಟುಕೊಡಲು ನಿರಾಕರಿಸಿದ್ದರು ಎಂದು ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ.

ಒಬ್ಬ ಗ್ರಾಹಕರು ಮಾತ್ರ ತಾವಾಗೇ ವಿಮಾನದಿಂದ ಹೊರಬರಲು ನಿರಾಕರಿಸಿದ್ರು. ಆದ್ದರಿಂದ ಪೊಲೀಸರನ್ನು ಕರೆಸಲಾಯ್ತು. ವಿಮಾನಕ್ಕೆ ಹೆಚ್ಚುವರಿ ಬುಕ್ಕಿಂಗ್ ಮಾಡಿಕೊಂಡ ಬಗ್ಗೆ ಕ್ಷಮೆ ಯಾಚಿಸುತ್ತೇವೆ ಎಂದು ಭಾನುವಾರ ಯುನೈಟೆಡ್ ಏರ್‍ಲೈನ್ಸ್ ಹೇಳಿಕೆ ನೀಡಿದೆ.

ಆದ್ರೆ ಹೆಚ್ಚುವರಿ ಬುಕ್ಕಿಂಗ್ಸ್ ಮಾಡಿಕೊಂಡಿದ್ದಲ್ಲದೆ ಪ್ರಯಾಣಿಕರ ಜೊತೆ ಈ ರೀತಿ ವರ್ತಿಸಿರೋ ಯುನೈಟೆಡ್ ಏರ್‍ಲೈನ್ಸ್ ಸಿಬ್ಬಂದಿ ವಿರುದ್ಧ ಭಾರೀ ಖಂಡನೆ ವ್ಯಕ್ತವಾಗಿದೆ.

Advertisement
Advertisement